ಭಟ್ಕಳ: ತಾಲೂಕಿನ ವಿವಾದಿತ ಸ್ಥಳವಾದ ಮುರಿನಕಟ್ಟೆಯಲ್ಲಿ ಶ್ರೀ ಮಾರಿಕಾಂಬೆ ಅಮ್ಮನವರ ಹೊರೆ ತೆಗೆಯುವ ವೇಳೆ ಅಲ್ಲಿದ್ದ ಶ್ರೀ ದೇವಿಯ ಮರದ ಗೊಂಬೆ ನಾಪತ್ತೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದು, ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾದ ಘಟನೆ ರಾತ್ರಿ ನಡೆದಿದೆ.
ಕೆಲ ದಿನಗಳ ಹಿಂದಷ್ಟೇ ಆಸರಕೇರಿ ಭಾಗದ ಹಿಂದೂ ಬಾಂಧವರು ಭಟ್ಕಳ ಅರ್ಬನ್ ಬ್ಯಾಂಕ್ ಸಮೀಪದ ವನದುರ್ಗಿ ದೇವಸ್ಥಾನದ ಬಳಿ ಇದ್ದ ಅಮ್ಮನ ಹೊರೆ ಹಾಗೂ ಶಂಸುದ್ದಿನ್ ಸರ್ಕಲ್ ಬಳಿ ಇದ್ದ ದೇವಿಯ 2 ಅಮ್ಮನವರ ಗೊಂಬೆಯನ್ನು ಮುರಿನಕಟ್ಟೆಗೆ ಸಾಗಿಸಿ ಬಳಿಕ ದೇವಿಯ ಮರದ ಗೊಂಬೆಗೆ ಪೂಜೆ ಸಲ್ಲಿಸಿ ಬಂದಿದ್ದರು.
ರಾತ್ರಿ ಕಾರ್ಗದ್ದೆ ,ಹುರುಳಿಸಾಲ, ಕಡವಿನಕಟ್ಟೆ ಹಾಗೂ ರಂಗಿನಕಟ್ಟೆಯ ಗ್ರಾಮಸ್ಥರು ಮುರಿನಕಟ್ಟೆಯಲ್ಲಿದ್ದ ಅಮ್ಮನವರ ಹೊರೆಯನ್ನು ವೆಂಕಟಾಪುರ ಗಡಿ ಭಾಗಕ್ಕೆ ಸಾಗಿಸಲೆಂದು ಬಂದ ವೇಳೆ ಮುರಿನಕಟ್ಟೆಯಲ್ಲಿದ್ದ 2 ದೇವಿಯ ಮರದ ಗೊಂಬೆಗಳು ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಬಳಿಕ ಈ ವಿಷಯ ಎಲ್ಲಾ ಕಡೆ ಹರಡಿ ಸ್ಥಳಕ್ಕೆ ನೂರಾರು ಮಂದಿ ಜಮಾವಣೆಗೊಂಡು ಕೆಲ ಕಾಲ ಆತಂಕ ಸ್ರಷ್ಟಿಯಾಯಿತು.
ತಕ್ಷಣ ಕಾರ್ಯ ಪ್ರವೃತ್ತರಾದ ಭಟ್ಕಳ ನಗರ ಹಾಗೂ ಗ್ರಾಮೀಣ ಠಾಣೆಯ ಪೊಲೀಸರು ಬಂದು ಸ್ಥಳ ಪರಿಶೀಲನೆ ಮಾಡಿದರು. ರಾತ್ರಿಯಾದ ಕಾರಣ ಸ್ಥಳದಲ್ಲಿ ಗಿಡಗಂಟಿಗಳು ಬೆಳೆದುಕೊಂಡಿರುವುದರಿಂದ ಪರಿಶೀಲನೆ ಮಾಡಲು ಕಷ್ಟವಾಗಿದ್ದು ಬೆಳಗ್ಗೆ ಸರಿಯಾದ ರೀತಿಯಲ್ಲಿ ಸ್ಥಳ ಪರಿಶೀಲನೆ ಮಾಡುತ್ತೇವೆ ಎಂದು ಅಲ್ಲಿ ನೆರೆದಿದ್ದ ಹಿಂದೂ ಮುಖಂಡರಿಗೆ ಹೇಳಿದರು.
ಬಳಿಕ ಕೆಲ ಕಾಲ ಸ್ಥಳೀಯರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಪೊಲೀಸರು ಈ ಬಗ್ಗೆ ನೀವು ಪ್ರಕರಣ ದಾಖಲು ಮಾಡಿ. ನಾವು ಈ ಬಗ್ಗೆ ತನಿಖೆ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಬಳಿಕ ಅಲ್ಲಿದ್ದ ಹಿಂದೂ ಮುಖಂಡರಾದ ಗೋವಿಂದ ನಾಯ್ಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ದೂರವಾಣಿ ಕರೆ ಮಾಡಿ ಈ ಬಗ್ಗೆ ಸೂಕ್ತವಾಗಿ ತನಿಖೆ ಮಾಡಿ ಒಂದು ವಾರದೊಳಗಾಗಿ ಪ್ರಕರಣ ಇತ್ಯರ್ಥ ಮಾಡುತ್ತೇವೆ ಎಂದು ಹೇಳಿದರು. ಬಳಿಕ ಗೋವಿಂದ ನಾಯ್ಕ ಜಮಾವಣೆಗೊಂಡ ಹಿಂದೂ ಬಾಂಧವರಿಗೆ ಈ ಬಗ್ಗೆ ಮಾಹಿತಿ ನೀಡಿ ಮನವೊಳಿಸಲು ಯಶಸ್ವಿಯಾದರು.
ಬಳಿಕ ಸ್ಥಳೀಯರು ಅಲ್ಲಿಂದ ಅಮ್ಮನರ ಹೊರೆಯನ್ನು ವಾಹನದಲ್ಲಿ ತುಂಬಿಕೊಂಡು ವೆಂಕಟಾಪುರ ಗಡಿಭಾಗಕ್ಕೆ ತಲುಪಿಸಿದರು.
ಈ ಸಂದರ್ಭದಲ್ಲಿ ಹಿಂದೂ ಮುಖಂಡರಾದ ಗೋವಿಂದ ನಾಯ್ಕ ಮಾತನಾಡಿ, ಮಾರಿ ಹೊರೆಯನ್ನು ತೆಗೆಯುವ ಸಂಪ್ರದಾಯವು ತಲೆತಲಾಂತರದಿಂದ ನಡೆದುಕೊಂಡು ಬಂದಿದೆ. ಈ ಭಾಗದಿಂದ ಹೊರಡುವ ಅಮ್ಮನ ಹೊರೆ ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಹೋಗಿ ತಲುಪುತ್ತದೆ. ತಾಲೂಕಿನ ಎಲ್ಲಾ ಕಡೆಗಳಿಂದ ಬರುವ ಅಮ್ಮನ ಹೊರೆ ಮುರಿನಕಟ್ಟೆಗೆ ಬಂದು ಅಲ್ಲಿಂದ ಮುಂದೆ ಸಾಗಿಸಲಾಗುತ್ತದೆ.
ಈಗ ಇಲ್ಲಿದ್ದ 2 ಗೊಂಬೆ ನಾಪತ್ತೆಯಾಗಿದ್ದು, ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ. ಇಷ್ಟು ವರ್ಷದಿಂದ ಆಗದಿದ್ದ ಅನಾಹುತ ಈಗ ಆಗಿದೆ! ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನನ್ನೊಂದಿಗೆ ಮಾತನಾಡಿ ಒಂದು ವಾರ ಕಾಲಾವಕಾಶ ಕೊಟ್ಟು, ನಾವೆಲ್ಲ ಸೇರಿ ಇದಕ್ಕೂ ಕಾಯಂ ಪರಿಹಾರ ಹುಡುಕಬೇಕು. ನನ್ನ ಮೇಲೆ ವಿಶ್ವಾಸವಿಡಿ ಎಂದು ಹೇಳಿದ್ದಕ್ಕೆ ನಾವು ಈಗ ಶಾಂತರಾಗಿದ್ದೇವೆ ಎಂದರು. ಈ ವೇಳೆ ಗ್ರಾಮೀಣ ಠಾಣೆಯ ಸಿಪಿಐ ಚಂದನ ಗೋಪಾಲ ಹಾಗೂ ನಗರ ಮತ್ತು ಗ್ರಾಮೀಣ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
PublicNext
28/12/2024 08:27 am