ಧಾರವಾಡ: ಬೆಳಗಾವಿಯಲ್ಲಿ ಕಾಂಗ್ರೆಸ್ ನಾಯಕರು ಕಾಂಗ್ರೆಸ್ ಅಧಿವೇಶನ ಮಾಡುತ್ತಿದ್ದಾರೆ. ಅವರು ಅಧಿವೇಶನ ಮಾಡುತ್ತಿರುವುದಕ್ಕೆ ನಮ್ಮ ತಕರಾರಿಲ್ಲ. ಆದರೆ, ಸರ್ಕಾರದ ದುಡ್ಡಲ್ಲಿ ಅಧಿವೇಶನ ಮಾಡುತ್ತಿರುವುದು ಏಕೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಶ್ನಿಸಿದ್ದಾರೆ.
ಧಾರವಾಡದಲ್ಲಿ ಮಾತಾಡಿದ ಅವರು, ಕಾಂಗ್ರೆಸ್‌ನವರು ಭಾರತದ ನಕಾಶೆಗೂ ಅವಮಾನ ಮಾಡಿದ್ದಾರೆ. ಇಂತವರು ದೇಶವನ್ನು ಏನು ಸುಧಾರಣೆ ಮಾಡುತ್ತಾರೆ. ಹೆಸ್ಕಾಂನಿಂದ ಬೆಳಗಾವಿಯಲ್ಲಿ ದೀಪಾಲಂಕಾರ ಮಾಡಿಸಿದ್ದಾರೆ. ಕಾಂಗ್ರೆಸ್ ಸಮಾವೇಶಕ್ಕೂ ಹೆಸ್ಕಾಂಗೂ ಏನು ಸಂಬಂಧ? ಗಾಂಧಿ ಕುಳಿತ ಜಾಗದಲ್ಲಿ ಖರ್ಗೆ ಕುಳಿತಿದ್ದಾರೆ ಎನ್ನುತ್ತಿದ್ದಾರೆ. ಆದರೆ, ಆಗಿನ ಕಾಂಗ್ರೆಸ್ ಬೇರೆ ಈಗಿನ ಕಾಂಗ್ರೆಸ್ ಬೇರೆ. ಆವತ್ತೇ ಗಾಂಧೀಜಿ ಕಾಂಗ್ರೆಸ್‌ನ್ನು ವಿಸರ್ಜಿಸಿ ಎಂದಿದ್ದಾರೆ. ಆದರೆ, ಇವರು ಗಾಂಧಿ ಹೆಸರಿನಲ್ಲಿ ಜಾತ್ರೆ ಮಾಡುತ್ತಿದ್ದಾರೆ. ಸರ್ಕಾರಿ ಹಣದಲ್ಲಿ ತಮ್ಮ ಜಾತ್ರೆ ಮಾಡುತ್ತಿದ್ದಾರೆ. ಕೇಳಿದರೆ ದುರಹಂಕಾರದಿಂದ ಮಾತನಾಡುತ್ತಿದ್ದಾರೆ ಎಂದರು.
ಬೀದರ್‌ನಲ್ಲಿ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಜೋಶಿ, ಇದೇ ರೀತಿ ಬೆಳಗಾವಿಯಲ್ಲೂ ಸಚಿವರ ಮೇಲೆ ಗಂಭೀರ ಆರೋಪ ಕೇಳಿ ಬಂದಿತ್ತು. ಅದನ್ನು ಮುಚ್ಚಿ ಹಾಕಿದರು. ಈಗ ಬೀದರ್‌ನಲ್ಲಿ ಓರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಚಿವರ ಆಪ್ತನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದಲೇ ಸರ್ಕಾರ ಯಾವ ದಿಕ್ಕಿನತ್ತ ಹೊರಟಿದೆ ಎಂಬುದು ಗೊತ್ತಾಗುತ್ತದೆ. ಈ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಿಂದ ಕೂಡಿದೆ ಎಂದರು.
ಮುನಿರತ್ನ ಅವರ ಮೇಲೆ ಮೊಟ್ಟೆ ಎಸೆದ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಕಾಂಗ್ರೆಸ್ ಕೈವಾಡ ಇಲ್ಲ ಎನ್ನುತ್ತಾರೆ. ಹಾಗಾದ್ರೆ ಪೊಲೀಸರು ಏನು ಮಾಡುತ್ತಿದ್ದರು. ಮುನಿರತ್ನ ಅವರಿಗೆ ತೊಂದರೆ ಕೊಡುವ ಕೆಲಸ ಆಗಾಗ ನಡದೇ ಇದೆ. ಮುನಿರತ್ನ ಅವರ ಮೇಲೆ ಆರೋಪ ಬಂದಿತ್ತು. ಈಗ ಅವರು ಕೋರ್ಟ್‌ನಿಂದ ಬೇಲ್ ತೆಗೆದುಕೊಂಡು ಬಂದಿದ್ದಾರೆ. ಆದರೆ ಕೋರ್ಟ್ ಕ್ಷೇತ್ರಕ್ಕೆ ಹೋಗಬೇಡಿ ಎಂದು ಹೇಳಿಲ್ಲ. ಹೀಗಿರುವಾಗ ಅವರಿಗೆ ತೊಂದರೆ ಕೊಡುತ್ತಿರುವುದು ಏಕೆ? ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದು ಧಮ್ಕಿ ಹಾಕುತ್ತಿದ್ದಾರೆ. ಇದು ಒಳ್ಳೆಯದಲ್ಲ ಎಂದು ಜೋಶಿ ಕಿಡಿಕಾರಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
26/12/2024 10:59 pm