ಹುಬ್ಬಳ್ಳಿ: ಉಣಕಲ್‌ನ ಅಚ್ಚವ್ವನ ಕಾಲೋನಿಯಲ್ಲಿನ ಶಿವನ ದೇವಸ್ಥಾನದಲ್ಲಿ ನಡೆದ ಗ್ಯಾಸ್ ಸಿಲಿಂಡರ್ ಸ್ಫೋಟದ ದೃಶ್ಯಗಳು ಮನೆಯೊಂದರಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ನೋಡುಗರ ಎದೆ ನಡುಗಿಸುವಂತಿದೆ.
ಭಾನುವಾರ ಮಧ್ಯರಾತ್ರಿ 1.25ರ ವೇಳೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಸಿಲಿಂಡರ್ ಸ್ಫೋಟವಾಗುತ್ತಿದ್ದಂತೆ ಮಾಲಾಧಾರಿಗಳು ಮಲಗಿದ್ದ ಕೋಣೆಯಿಂದ ದೊಡ್ಡ ಪ್ರಮಾಣದ ಬೆಂಕಿ ಕಂಡು ಬಂದಿದೆ. ಈ ವೇಳೆ ದೇವಸ್ಥಾನದ ಮೊದಲನೆಯ ಮಹಡಿಯಲ್ಲಿ ಮಲಗಿದ್ದ 9 ಜನ ಅಯ್ಯಪ್ಪ ಮಾಲಾಧಾರಿಗಳ ಮೇಲೆ ಬೆಂಕಿ ಆವರಿಸಿದೆ. ಆಗ ಕೆಲವು ಅಯ್ಯಪ್ಪ ಮಾಲಾಧಾರಿಗಳು ಬಾಗಿಲನ್ನು ತೆಗೆದು ರಸ್ತೆಗೆ ಬಂದು ಕಿರುಚಾಡಿದ್ದಾರೆ. ಈ ವೇಳೆ ಅಯ್ಯಪ್ಪ ಮಾಲಾಧಾರಿಗಳ ಮೇಲೆ ಬೆಂಕಿ ಹತ್ತಿರೋ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಕಂಡುಬಂದಿದೆ.
ಅಯ್ಯಪ್ಪ ಮಾಲಾಧಾರಿಗಳ ಆರ್ತನಾದವನ್ನು ಕೇಳಿದ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಎಲ್ಲರೂ ಸೇರಿ ಗಾಯಗೊಂಡ ಅಯ್ಯಪ್ಪ ಮಾಲಾಧಾರಿಗಳನ್ನು ಟಾಟಾ ಎಸ್ ವಾಹನದಲ್ಲಿ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ಎಲ್ಲ ದೃಶ್ಯಗಳು ದೇವಸ್ಥಾನದ ಕೂಗಳತೆಯಲ್ಲಿನ ಮನೆಯೊಂದರಲ್ಲಿ ಹಾಕಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿನಯ ರೆಡ್ಡಿ, ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
24/12/2024 06:21 pm