ಧಾರವಾಡ: ಎಂಟತ್ತು ವರ್ಷಗಳಿಂದ ಆ ಕುಟುಂಬ ಹೊಟ್ಟಿನ ವ್ಯಾಪಾರ ಮಾಡುತ್ತಿತ್ತು. ಹೊಲದಲ್ಲಿ ಬೆಳೆದ ಬಿಳಿ ಜೋಳದ ಕಣಕಿಯನ್ನು ಕೊರೆದು ಹೊಟ್ಟು ಮಾಡಿ ಅದನ್ನು ಮಾರಾಟ ಮಾಡುವ ಕೆಲಸ ಮಾಡುತ್ತಿತ್ತು. ಅದೇ ರೀತಿ ಹೊಟ್ಟು ತುಂಬಿಕೊಂಡು ಗೋವಾಕ್ಕೆ ಹೊರಟಿದ್ದ ಸಂದರ್ಭದಲ್ಲಿ ಜವರಾಯ ತನ್ನ ಅಟ್ಟಹಾಸ ಮೆರೆದಿದ್ದಾನೆ.
ಹೌದು! ಅಳ್ನಾವರ ಸಮೀಪ ಸೋಮವಾರ ಬೆಳಗಿನ ಜಾವ ಹೊಟ್ಟು ತುಂಬಿದ ಕ್ಯಾಂಟರ್ ಮತ್ತು ಟಿಟಿ ವಾಹನದ ಮಧ್ಯೆ ಅಪಘಾತ ಸಂಭವಿಸಿ ಕ್ಯಾಂಟರ್‌ನಲ್ಲಿದ್ದ ಮೂವರು ಅಸುನೀಗಿದ್ದಾರೆ!
ಮೂಲತಃ ಸವದತ್ತಿ ತಾಲೂಕಿನ ಶಿರಸಂಗಿಯವರಾದ ಮಹಾದೇವಪ್ಪ ಹಾಲೊಳ್ಳಿ ಎಂಬುವವರು ಈ ಹೊಟ್ಟಿನ ವ್ಯಾಪಾರ ಮಾಡುತ್ತಿದ್ದರು. ಕಣಕಿ ಹೊಟ್ಟನ್ನು ಕ್ಯಾಂಟರ್‌ನಲ್ಲಿ ಲೋಡ್ ಮಾಡಿಕೊಂಡು ಗೋವಾದತ್ತ ತೆರಳಿ ಅಲ್ಲಿ ಡೇರಿ ಫಾರ್ಮ್ ಹಾಗೂ ಗೋಶಾಲೆಗಳಿಗೆ ಮಾರಾಟ ಮಾಡುತ್ತಿದ್ದರು. ಅದೇ ರೀತಿ ಭಾನುವಾರ ಸಹ ಹೊಟ್ಟು ತುಂಬಿಕೊಂಡು ನಾಲ್ಕು ಜನ ಗೋವಾದತ್ತ ಹೊರಟಿದ್ದರು.
ಈ ವೇಳೆ ರಸ್ತೆ ತಿರುವಿನಲ್ಲಿ ಕ್ಯಾಂಟರ್ ವಾಹನ ಮಗುಚಿ ಬಿದ್ದು, ಬಳಿಕ ಮುಂದೆ ಬರುತ್ತಿದ್ದ ಟಿಟಿ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಕ್ಯಾಂಟರ್‌ನಲ್ಲಿದ್ದ ಮಹಾದೇವಪ್ಪ ಹಾಲೊಳ್ಳಿ, ಹನುಮಂತ ಮಲ್ಲಾಡ ಹಾಗೂ ಮಹಾಂತೇಶ ಚೌಹಾಣ ಸ್ಥಳದಲ್ಲೇ ಸಾವಿಗೀಡಾದರೆ ಚಾಲಕ ಗಂಭೀರವಾಗಿ ಗಾಯಗೊಂಡು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಅಪಘಾತವಾದ ವಿಷಯವನ್ನು ಅಳ್ನಾವರ ಠಾಣೆ ಪೊಲೀಸರು ಶಿರಸಂಗಿಯ ಹಾಲೊಳ್ಳಿ ಅವರ ಕುಟುಂಬಸ್ಥರಿಗೆ ತಿಳಿಸಿದ್ದರಿಂದ ಅವರ ಕುಟುಂಬಸ್ಥರು ಧಾರವಾಡದ ಜಿಲ್ಲಾಸ್ಪತ್ರೆಯ ಶವಾಗಾರದ ಎದುರು ಜಮಾಯಿಸಿದ್ದರು. ತಮ್ಮೂರಿನ ಮೂವರು ಸಾವಿಗೀಡಾಗಿದ್ದರಿಂದ ಶಿರಸಂಗಿಯ ಗ್ರಾಮಸ್ಥರು ಮಮ್ಮಲ ಮರುಗುತ್ತಿದ್ದ ದೃಶ್ಯ ಕಂಡು ಬಂತು. ಆ ಮೂರೂ ಶವಗಳ ಮರಣೋತ್ತರ ಪರೀಕ್ಷೆ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಅಳ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
23/12/2024 07:24 pm