ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಇತಿಹಾಸದ ಪುಟ ಸೇರಲು ಸಜ್ಜಾದ ಶ್ರೀನಿವಾಸ -ಪದ್ಮಾ

ಧಾರವಾಡ: ಕಾಲೇಜು ಹುಡುಗರಿಗೆಲ್ಲ ಆ ಎರಡೂ ಚಿತ್ರಮಂದಿರಗಳೆಂದರೆ ಅಚ್ಚುಮೆಚ್ಚು. ಹಳ್ಳಿಯ ಜನರಂತೂ ಆ ಚಿತ್ರಮಂದಿರಗಳಿಗೆ ಪ್ರತಿದಿನ ಬಂದು ಸಿನಿಮಾ ನೋಡಿ ಸಂತಸಪಡುತ್ತಿದ್ದರು. 1966 ಹಾಗೂ 1976ರ ದಶಕದಲ್ಲಿ ಆರಂಭಗೊಂಡಿದ್ದ ಧಾರವಾಡದ ಎರಡು ಚಿತ್ರಮಂದಿರಗಳು ಇದೀಗ ಆಟವನ್ನೇ ನಿಲ್ಲಿಸಿ ಇತಿಹಾಸದ ಪುಟ ಸೇರಲು ಸಜ್ಜಾಗಿವೆ.

ಹೌದು! ಧಾರವಾಡದ ಹೃದಯ ಭಾಗದಲ್ಲಿರುವ ಈ ಎರಡೂ ಚಿತ್ರಮಂದಿರಗಳ ಹೆಸರು ಶ್ರೀನಿವಾಸ ಮತ್ತು ಪದ್ಮಾ. ವಿಶಾಲವಾದ ಜಾಗದಲ್ಲಿ ಸುಸಜ್ಜಿತ ಕಟ್ಟಡ ಹೊಂದಿರುವ ಈ ಚಿತ್ರಮಂದಿರಗಳು ಕಳೆದ ಎಂಟು ತಿಂಗಳಿಂದ ಆಟವನ್ನೇ ನಿಲ್ಲಿಸಿವೆ. ಇದಕ್ಕೆ ಪ್ರಮುಖ ಕಾರಣ ಸಿನಿಪ್ರಿಯರ ಕೊರತೆ ಒಂದೆಡೆಯಾದರೆ ಕನ್ನಡದಲ್ಲಿ ಹೆಚ್ಚೆಚ್ಚು ಒಳ್ಳೆಯ ಸಿನಿಮಾಗಳು ಬರದೇ ಇರುವುದು.

1966ರಲ್ಲಿ ಶ್ರೀನಿವಾಸ ಚಿತ್ರಮಂದಿರ ನಿರ್ಮಾಣವಾಗಿತ್ತು. ಅದಾದ ಬಳಿಕ 1976ರಲ್ಲಿ ಪದ್ಮಾ ಚಿತ್ರಮಂದಿರ ಅದರ ಪಕ್ಕವೇ ನಿರ್ಮಾಣಗೊಂಡು ದಶಕಗಳ ಕಾಲ ಸಿನಿಪ್ರಿಯರಿಗೆ ರಸದೌತಣವನ್ನೇ ಉಣಬಡಿಸಿವೆ. ಈ ಚಿತ್ರಮಂದಿರಗಳನ್ನು ಅವಳಿ ಚಿತ್ರಮಂದಿರ ಎಂತಲೇ ಕರೆಯಲಾಗುತ್ತಿತ್ತು. ಧಾರವಾಡ ನಗರದಲ್ಲಿದ್ದ ಏಳು ಚಿತ್ರಮಂದಿರಗಳ ಪೈಕಿ ಮೊದಲು ಮೂರು ಚಿತ್ರಮಂದಿರಗಳು ಮೊದಲೇ ಮುಚ್ಚಿದ್ದವು. ಶ್ರೀನಿವಾಸ ಹಾಗೂ ಪದ್ಮಾ ಚಿತ್ರಮಂದಿರಗಳು ದೊಡ್ಡವು. ಅವು ಯಾವಾಗ ಮುಚ್ಚಬೇಕು ಎಂದುಕೊಂಡವರ ನಂಬಿಕೆ ಇದೀಗ ಹುಸಿಯಾಗಿದೆ. ಕಳೆದ ಎಂಟು ತಿಂಗಳಿಂದ ಈ ಚಿತ್ರಮಂದಿರಗಳು ಆಟವನ್ನೇ ನಿಲ್ಲಿಸಿದ್ದು, ಇದೀಗ ಧಾರವಾಡದಲ್ಲಿ ಮತ್ತೆರಡು ಚಿತ್ರಮಂದಿರಗಳು ಮುಚ್ಚಿದಂತಾಗಿದೆ. ಕನ್ನಡದಲ್ಲಿ ವರ್ಷಕ್ಕೆ ದೊಡ್ಡ ದೊಡ್ಡ ನಟರ ಐದಾರು ಚಿತ್ರಗಳಾದರೂ ಬರಬೇಕು. ಸಿನಿಪ್ರಿಯರಿಗೆ ಚಿತ್ರಗಳನ್ನು ನೋಡುವ ಹುಚ್ಚು ಇರಬೇಕು. ಆದರೆ, ಇವ್ಯಾವೂ ಇಲ್ಲದ ಕಾರಣ ಚಿತ್ರಮಂದಿರಗಳು ಲಾಸ್‌ನಲ್ಲಿ ನಡೆಯುತ್ತಿವೆ. ಜನ ಟಾಕೀಸ್‌ನತ್ತ ಬರುತ್ತಲೇ ಇಲ್ಲ. ಬದಲಾದ ವಿದ್ಯಾಮಾನ, ಓಟಿಟಿ, ವಿವಿಧ ತಂತ್ರಜ್ಞಾನಗಳ ಮೂಲಕ ಪ್ರೇಕ್ಷಕರು ಚಿತ್ರ ನೋಡುತ್ತಿರುವುದರಿಂದ ಚಿತ್ರಮಂದಿರದ ಮಾಲೀಕರು ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಚಿತ್ರಮಂದಿರಗಳನ್ನು ಬಂದ್ ಮಾಡಬೇಕಾಯ್ತು ಎನ್ನುತ್ತಾರೆ ಮಾಲೀಕರು.

ಡಾ.ರಾಜಕುಮಾರ್, ಡಾ.ವಿಷ್ಣುವರ್ಧನ್, ಅನಂತನಾಗ, ರವಿಚಂದ್ರನ್, ಸುದೀಪ್, ದರ್ಶನ್, ಪುನೀತ್‌ರಾಜಕುಮಾರ, ಶಿವರಾಜಕುಮಾರ ಸೇರಿದಂತೆ ಅನೇಕ ದೊಡ್ಡ ದೊಡ್ಡ ನಟರ ಚಿತ್ರಗಳು ಈ ಚಿತ್ರಮಂದಿರದಲ್ಲಿ ಶತದಿನೋತ್ಸವ ಆಚರಿಸಿವೆ. ಸಂಪತ್ತಿಗೆ ಸವಾಲ್, ಮಯೂರ, ಯಜಮಾನ ಸಿನಿಮಾಗಳಂತೂ ವರ್ಷಗಟ್ಟಲೇ ಪ್ರದರ್ಶನ ಕಂಡಿವೆ. ಇತ್ತೀಚೆಗೆ ಒಳ್ಳೆಯ ಚಿತ್ರಗಳು ಹಾಗೂ ವರ್ಷಕ್ಕೆ ಐದಾರು ಚಿತ್ರಗಳು ಬರದೇ ಇರುವುದೇ ಚಿತ್ರಮಂದಿರ ಬಂದ್ ಆಗಲು ಕಾರಣ ಎನ್ನುತ್ತಾರೆ ರಾಜು ಕುಲಕರ್ಣಿ.

ಅನೇಕ ದಶಕಗಳ ಕಾಲ ಜನರನ್ನು ರಂಜಿಸಿದ್ದ ಶ್ರೀನಿವಾಸ ಹಾಗೂ ಪದ್ಮಾ ಚಿತ್ರಮಂದಿರಗಳು ಇದೀಗ ಇತಿಹಾಸದತ್ತ ಮುಖ ಮಾಡಿವೆ. ಪರೀಕ್ಷೆಗಳನ್ನು ಮುಗಿಸಿ ವಿದ್ಯಾರ್ಥಿಗಳು ಇಲ್ಲಿ ಸಿನಿಮಾ ನೋಡಿಯೇ ಹೋಗುತ್ತಿದ್ದರು. ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಇದ್ದ ಚಿತ್ರಮಂದಿರಗಳು ಇವಾಗಿದ್ದವು. ಅನೇಕ ಚಿತ್ರನಟರು ಇಲ್ಲಿಗೆ ಬಂದೂ ಹೋಗಿದ್ದರು. ಈ ಚಿತ್ರಮಂದಿರಗಳ ಸುತ್ತ ಅನೇಕ ಡಬ್ಬಾ ಅಂಗಡಿಯವರು ಜೀವನ ಕಟ್ಟಿಕೊಂಡಿದ್ದರು. ಆದರೆ, ಅವರೂ ಈಗ ನಷ್ಟ ಅನುಭವಿಸುವಂತಾಗಿದೆ. 60 ಜನ ಸಿಬ್ಬಂದಿ ಇಲ್ಲಿ ಕೆಲಸ ಮಾಡುತ್ತಿದ್ದರು. ಈಗ ಅವರೆಲ್ಲ ಅನಿವಾರ್ಯವಾಗಿ ಬೇರೆ ಕೆಲಸ ಅರಸಿ ಹೋಗಿದ್ದಾರೆ. ಒಟ್ಟಾರೆ ಚಿತ್ರರಂಗದಿಂದ ಒಳ್ಳೊಳ್ಳೆ ಸಿನಿಮಾಗಳು ಬರದೇ ಇರುವುದು ಸಿನಿ ಪ್ರಿಯರ ಕೊರತೆಯಿಂದಾಗಿ ಧಾರವಾಡದ ಮತ್ತೆರಡು ಚಿತ್ರಮಂದಿರಗಳು ಇದೀಗ ಮುಚ್ಚಿದಂತಾಗಿವೆ.

-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

22/12/2024 07:39 am

Cinque Terre

76.85 K

Cinque Terre

5

ಸಂಬಂಧಿತ ಸುದ್ದಿ