ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಎನ್.ಜಿ.ಇ.ಎಫ್ ಒಂದಿಲ್ಲೊಂದು ಮಹತ್ವದ ಕಾರ್ಯ ಮಾಡುವ ಮೂಲಕ ಸಾಧನೆ ಮಾಡುತ್ತಲೇ ಬಂದಿದೆ. ಈ ನಿಟ್ಟಿನಲ್ಲಿ ಈಗ ಮತ್ತೊಂದು ಕಾರ್ಯಕ್ಕೆ ಮುಂದಾಗಿದ್ದು, ಇದೀಗ ಮತ್ತೊಂದು ಹೊಸ ಮಜಲಿಗೆ ತೆರೆದು ಕೊಂಡಿದೆ. ವಿದ್ಯುತ್ ಪರಿವರ್ತಕ ತಯಾರಿಸುವ ಸರ್ಕಾರಿ ಸ್ವಾಮ್ಯದ ಕಂಪನಿ ನ್ಯೂ ಗವರ್ನ್‌ಮೆಂಟ್ ಇಲೆಕ್ಟಿಕ್ ಫ್ಯಾಕ್ಟರಿ (ಎನ್‌ಜಿಇಎಫ್) ಇದೀಗ ಮತ್ತೊಂದು ಹೊಸ ಕಾರ್ಯ ಸಾಧನೆಗೆ ಮುಂದಾಗಿದೆ.
ಈಗಾಗಲೇ ವಿದ್ಯುತ್ ಮೋಟಾರ್ಸ್ ತಯಾರಿಸಿ ಗುಣಮಟ್ಟದಿಂದ ದೇಶ ವಿದೇಶಗಳಲ್ಲಿ ಗ್ರಾಹಕರನ್ನು ಹೊಂದಿರುವ ಎನ್‌ಜಿಇಎಫ್ ಕೆಲ ವರ್ಷಗಳಿಂದ ವಿದ್ಯುತ್ ಪರಿವರ್ತಕಗಳನ್ನು (ಟಿಸಿ) ಉತ್ಪಾದನೆ ಮಾಡುವ ಮೂಲಕ ವಿಶಿಷ್ಟ ಸಾಧನೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ವಿಶೇಷವಾಗಿ ಹೆಚ್ಚು ಸಾಮರ್ಥ್ಯದ ಟಿಸಿ ಉತ್ಪಾದನೆ ಮಾಡುವಲ್ಲಿ ನಿರತವಾಗಿರುವ ಎನ್ ಜಿಇಎಫ್‌ಗೆ ಕೆಲ ತಿಂಗಳ ಹಿಂದೆ ಗುಜರಾತ್‌ನ ರೈಲ್ವೆ ಯೋಜನೆಗಾಗಿ ರೈಲ್ವೆ ಇಲಾಖೆ ಟಿಸಿ ಬೇಡಿಕೆ ಸಲ್ಲಿಸಿತ್ತು. ಅದರಂತೆ 14 ಬೃಹತ್ ಟಿಸಿ ಉತ್ಪಾದನೆ ಮಾಡಿ ಪೂರೈಕೆ ಮಾಡುತ್ತಿದೆ.
ಹುಬ್ಬಳ್ಳಿ ಎನ್‌ಜಿಇಎಫ್‌ನಲ್ಲಿ ಎರಡು ತಿಂಗಳ ಹಿಂದೆ ಐದು ಟಿಸಿ ತಯಾರಿಸಿ ಕಳುಹಿಸಿಕೊಡಲಾಗಿದೆ. ಇದೀಗ ಉಳಿದ 9 ಟಿಸಿಗಳನ್ನು ಪಂಜಾಬ್‌ನ ಭಟಿಂದಾದಲ್ಲಿರುವ ಎನ್‌ಜಿಇಎಫ್‌ನ ಶಾಖೆಯಲ್ಲಿ ತಯಾರಿಸಲಾಗಿದೆ. ಇದೀಗ ಅವುಗಳನ್ನು ಹುಬ್ಬಳ್ಳಿಯ ಮುಖ್ಯ ಕಚೇರಿಯಲ್ಲಿ ಪರೀಕ್ಷೆಗೆ ಒಳಪಡಿಸಿ ಗುಜರಾತ್‌ನ ರೈಲ್ವೆ ಯೋಜನೆಗಾಗಿ ಕಳುಹಿಸಿ ಕೊಡಲಾಗುತ್ತಿದೆ. ಸದ್ಯ ಭಟಿಂದಾದಿಂದ 9 ಟ್ರಾನ್ಸ್‌ಫಾರ್ಮ‌್ರಗಳು ಲಾರಿಯಲ್ಲಿ ಲೋಡ್ ಆಗಿ ಹುಬ್ಬಳ್ಳಿಯತ್ತ ಮುಖ ಮಾಡಿವೆ. ನಾಲೈದು ದಿನದಲ್ಲಿ ಹುಬ್ಬಳ್ಳಿಗೆ ಬರಲಿವೆ ಎಂದು ಸಂಸ್ಥೆಯ ಎಂಡಿ ಎಸ್.ಎಚ್.ನೇರೆಗಲ್ ಪಬ್ಲಿಕ್ ನೆಕ್ಸ್ಟ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಡಿ.26, 27ರಂದು ರೈಲ್ವೆ ಇಲಾಖೆಯಿಂದ ಎನ್‌ಜಿಇಎಫ್‌ಗೆ ಬರುವ ಅಧಿಕಾರಿಗಳು ಪರೀಕ್ಷೆ ನಡೆಸುವರು. 400 ಕೆವಿಎ, 500 ಕೆವಿಎ, 630 ಕೆವಿಎ, 800 ಕೆವಿಎ ಸಾಮರ್ಥ್ಯದ ಟಿಸಿಗಳು ಇವಾಗಿವೆ. ಬರುವ ಜನವರಿಯಲ್ಲಿ ಗುಜರಾತ್‌ನ ದಹೋಡಾನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರೈಲ್ವೆ ಯೋಜನೆಯನ್ನು ಉದ್ಘಾಟನೆ ಮಾಡಲಿದ್ದಾರೆ.
ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
22/12/2024 11:32 am