ಅಮರಾವತಿ: ಪುಷ್ಪ 2 ಸಿನಿಮಾ ಪ್ರೀಮಿಯರ್ ಶೋ ವೇಳೆ ಹೈದರಾಬಾದ್‌ನ ಸಂಧ್ಯಾ ಚಿತ್ರಮಂದಿರದ ಬಳಿ ನಡೆದ ಕಾಲ್ತುಳಿತದಲ್ಲಿ ಮಹಿಳೆ ಸಾವನ್ನಪ್ಪಿದ ಘಟನೆ ಕುರಿತು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮತ್ತೆ ಚಾಟಿ ಬೀಸಿದ್ದಾರೆ. ಅಷ್ಟೇ ಅಲ್ಲದೆ ತೆಲುಗು ಚಿತ್ರರಂಗದ ವಿರುದ್ಧವೂ ಗುಡುಗಿದ್ದಾರೆ.
ತೆಲಂಗಾಣ ವಿಧಾನಸಭೆಯಲ್ಲಿ ಶನಿವಾರ ಎಐಎಂಐಎಂ ಶಾಸಕ ಅಕ್ಬರುದ್ದೀನ್ ಓವೈಸಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ರೇವಂತ್ ರೆಡ್ಡಿ, ಚಿತ್ರಮಂದಿರದ ಬಳಿ ಕಾಲ್ತುಳಿದಲ್ಲಿ ಮಹಿಳೆ ಮೃತಪಟ್ಟಿದ್ದರೆ, ಆಕೆಯ 9 ವರ್ಷದ ಮಗ ಬ್ರೈನ್ ಡೆಡ್ ಆಗಿ ಆಸ್ಪತ್ರೆಯಲ್ಲಿದ್ದಾನೆ. ಆತನನ್ನು ಒಬ್ಬನೇ ಒಬ್ಬನಾದರೂ ಚಿತ್ರರಂಗದವರು ಹೋಗಿ ನೋಡಿದ್ದಾರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಮಹಾನ್ ಸಿನಿಮಾ ಪ್ರಮುಖರು ಸರ್ಕಾರ, ಪೊಲೀಸರು ಹಾಗೂ ನನ್ನನ್ನು ಟೀಕಿಸುತ್ತಿದ್ದಾರೆ, ಆ ನಟನನ್ನು ಬೆಂಬಲಿಸುತ್ತಿದ್ದಾರೆ. ಅಷ್ಟಕ್ಕೂ ಆಗಿದ್ದಾರೂ ಏನು? ಆ ನಟನ ಕಾಲು ಹೋಗಿದೆಯಾ.? ಕಣ್ಣು ಹೋಗಿದೆಯಾ..? ಕೈ ಹೋಗಿದೆಯಾ..? ಈ ಸಿನಿಮಾ ಪ್ರಮುಖರು ಏನು ಆಲೋಚನೆ ಮಾಡುತ್ತಿದ್ದಾರೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ಇದು ಅತ್ಯಂತ ನಾಚಿಕೆಯ ಸಂಗತಿಯಾಗಿದೆ ಎಂದು ಟೀಕಿಸಿದ್ದಾರೆ.
ಈ ನಕಲಿ ಸಿನಿ ತಾರೆಯರನ್ನು ರೋಲ್ ಮಾಡೆಲ್ ಆಗಿ ತೆಗೆದುಕೊಳ್ಳಬೇಡಿ ಮತ್ತು ಅವರನ್ನು ರಕ್ಷಿಸಲು ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಬೇಡಿ. ಬದಲಿಗೆ ನಿಮ್ಮ ಕುಟುಂಬದೊಂದಿಗೆ ಆ ಸಮಯವನ್ನು ಕಳೆಯಿರಿ ಮತ್ತು ಭವಿಷ್ಯದ ಮೇಲೆ ಕೇಂದ್ರೀಕರಿಸಿ ಮತ್ತು ಸಂತೋಷವಾಗಿರಿ ಎಂದು ಸಿಎಂ ರೇವಂತ್ ರೆಡ್ಡಿ ಯುವಕರಿಗೆ ಕಿವಿಮಾತು ಹೇಳಿದ್ದಾರೆ.
PublicNext
22/12/2024 05:21 pm