ಬೇಲೂರು: ಬೇಲೂರು ತಾಲ್ಲೂಕಿನ ಅರೇಹಳ್ಳಿ ಪಟ್ಟಣದ ಎಟಿಎಂ ಕೇಂದ್ರದ ಒಳಗೆ ಸರದಿ ಸಾಲಿನಲ್ಲಿ ನಿಂತಿದ್ದ ಅಪರಿಚಿತ ವ್ಯಕ್ತಿಯೊಬ್ಬ ಹಣ ಹಿಂಪಡೆಯಲು ಬಂದಿದ್ದ ಮುಗ್ಧ ಮಹಿಳೆಯೊಬ್ಬರ ಪಾಸ್ ವರ್ಡ್ ಮಾಹಿತಿಯೊಂದಿಗೆ ಹಣ ತೆಗೆದು ಕೊಡುತ್ತೇನೆ ಎಂದು ನಂಬಿಸಿ ಎಟಿಎಂ ಕಾರ್ಡ್ ಪಡೆದುಕೊಂಡು ನಕಲಿ ಕಾರ್ಡ್ ಮಹಿಳೆಗೆ ಹಿಂತಿರುಗಿಸಿ ಕೆಲ ಹೊತ್ತಿನಲ್ಲಿಯೇ ಸುಮಾರು ಐವತ್ತು ಸಾವಿರ ಹಣವನ್ನು ದೋಚಿದ್ದಾನೆ!
ಅರೇಹಳ್ಳಿ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಕರ್ಣಾಟಕ ಬ್ಯಾಂಕ್ ಎಟಿಎಂ ಕೇಂದ್ರಕ್ಕೆ ಪದ್ಮ ಎಂಬುವವರು ಇಂದು ಬೆಳಿಗ್ಗೆ ಸುಮಾರು 11.30ರ ಸಮಯದಲ್ಲಿ ತನ್ನ ಖಾತೆಯಿಂದ ಹಣ ಹಿಂಪಡೆಯಲು ತೆರಳಿದ್ದು, ಅದೇ ಸಮಯಕ್ಕೆ ಸರದಿ ಸಾಲಿನಲ್ಲಿ ನಿಂತಿದ್ದ ಆಪರಿಚಿತ ಯುವಕನೋರ್ವ ಹಣ ತೆಗೆದು ಕೊಡುತ್ತೇನೆ ಎಂದು ವಿನಂತಿಸಿದ್ದಾನೆ.
ಅವಿದ್ಯಾವಂತರಾದ ಪದ್ಮ ಅವರಿಗೆ ಎಟಿಎಂ ಬಗ್ಗೆ ಪೂರ್ಣ ಮಾಹಿತಿ ಇಲ್ಲದೇ ಇದ್ದುದ್ದರಿಂದ ತನ್ನ ಎಟಿಎಂ ಕಾರ್ಡ್ ನ್ನು ನೀಡಿ ತೆಗೆದು ಕೊಡುವಂತೆ ತಿಳಿಸಿದ್ದಾರೆ. ಅದರಂತೆ ಮೊದಲಿಗೆ ಮಹಿಳೆಯ ಬ್ಯಾಂಕ್ ಖಾತೆಯಲ್ಲಿರುವ ಒಟ್ಟು ಹಣವನ್ನು ಪರಿಶೀಲಿಸಿ ನಂತರ 10000 ಹಣವನ್ನು ತೆಗೆದುಕೊಟ್ಟು ,ತನ್ನ ಕೈಚಳಕದ ಮೂಲಕ ಮಹಿಳೆಯ ಮೂಲ ಎಟಿಎಂ ಕಾರ್ಡ್ ನ್ನು ಬದಲಿಸಿ ಅದೇ ರೀತಿ ಇರುವ ಇನ್ಯಾರದೋ ಎಟಿಎಂ ಕಾರ್ಡ್ ನ್ನು ನೀಡಿ ಕಳಿಸಿದ್ದಾನೆ.
ಮನೆಗೆ ಬಂದ ಕೆಲ ನಿಮಿಷಗಳಲ್ಲಿಯೇ ತನ್ನ ಖಾತೆಯಿಂದ ಹಣ ಖಾಲಿಯಾಗುತ್ತಿರುವ ಬಗ್ಗೆ ಸಂದೇಶಗಳು ಬರುತ್ತಿರುವುದನ್ನು ಗಮನಿಸಿ ಗಾಬರಿಗೊಂಡ ಪದ್ಮ, ತಕ್ಷಣ ಬ್ಯಾಂಕ್ ಗೆ ಬಂದು ಪರಿಶೀಲಿಸಿದಾಗ ತನ್ನ ಖಾತೆಗೆ ಕನ್ನ ಹಾಕಿದ್ದು, ಸರಿ ಸುಮಾರು ಐವತ್ತು ಸಾವಿರ ಹಣವನ್ನು ದೋಚಿ ವಂಚನೆ ಮಾಡಿರುವುದಾಗಿ ಮಹಿಳೆ ತನ್ನ ಅಳಲನ್ನು ಮಾಧ್ಯಮಕ್ಕೆ ತಿಳಿಸಿದ್ದಾರೆ.
PublicNext
21/12/2024 04:19 pm