ಸಕಲೇಶಪುರ : ಅಲ್ಪ ಸ್ವಲ್ಪ ಆದಾಯಕ್ಕಾಗಿ ಬಡ ಕೂಲಿ ಕಾರ್ಮಿಕರು ಸಾಕಿದ್ದ ನಾಟಿ ಕೋಳಿಗಳಿಗೆ ಕಿಡಿಗೇಡಿಗಳು ವಿಷವಿಟ್ಟು ಕೊಂದಿರುವ ಆರೋಪ ಕೇಳಿ ಬಂದಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹಾದಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ .
ಹಾದಿಗೆ ಗ್ರಾಮದಲ್ಲಿ ರವಿ ಹಾಗೂ ಇತರರು ಸೇರಿಕೊಂಡು ಸುಮಾರು 25ಕ್ಕೂ ಹೆಚ್ಚು ನಾಟಿ ಕೋಳಿಗಳನ್ನು ಸಾಕಿದ್ದರು. ಎಲ್ಲಾ ಕೋಳಿಗಳು ಸತ್ತುಹೋಗಿದ್ದು, ಕೋಳಿಗಳಿಗೆ ವಿಷವಿಟ್ಟು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ.
ಬಡ ಕೂಲಿ ಕಾರ್ಮಿಕರು ತಾವು ಸಾಕಿದ್ದ ಕೋಳಿಗಳನ್ನು ಹೊರಗಡೆ ಬಿಟ್ಟು ಕೆಲಸಕ್ಕೆ ತೆರಳಿದ್ದರು. ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಬಂದು ನೋಡಿದಾಗ ಎಲ್ಲಾ ಕೋಳಿಗಳು ಸತ್ತು ಬಿದ್ದಿದ್ದವು. ಇದನ್ನ ಕಂಡ ಕಾರ್ಮಿಕರು ಆತಂಕಗೊಂಡಿದ್ದಾರೆ. ಸಾಮೂಹಿಕವಾಗಿ ನಾಟಿ ಕೋಳಿಗಳನ್ನು ಕೆಲ ದುರುಳರು ವಿಷವಿಟ್ಟು ಕೊಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಸತ್ತ ಒಂದು ಕೋಳಿಯ ಬಾಯಿಂದ ಬೆಂಕಿ ಹಾಗೂ ಹೊಗೆ ಹೊರ ಬರುತ್ತಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
PublicNext
19/12/2024 12:15 pm