ಹುಬ್ಬಳ್ಳಿ: ಪೊಲೀಸ್ ಠಾಣೆ ಹೆಸರು ಕೇಳಿದರೇ ಕಳ್ಳರಿಗೆ, ಕ್ರಿಮಿನಲ್‌ಗಳಿಗೆ ಢವಢವ ಎನ್ನುವುದು ಸಹಜ. ಆದರೆ ಈ ಠಾಣೆಯ ಎದುರು ಸರಕು ತುಂಬಿದ ಒಂದು ಲಾರಿ ಸಾಗಿದರೂ ಸಾಕು, ಠಾಣೆಯ ಇಡೀ ಕಟ್ಟಡ ಗಡಗಡ ನಡುಗುತ್ತದೆ. ಹೀಗಿದ್ದರೂ ಪೊಲೀಸ್ ಠಾಣೆಗೆ ಮಾತ್ರ ಸ್ಥಳಾಂತರ ಭಾಗ್ಯ ಕೂಡಿ ಬಂದಿಲ್ಲ.
ಹುಬ್ಬಳ್ಳಿಯ ಬೆಂಗಳೂರು-ಪುಣೆ ಮುಖ್ಯರಸ್ತೆಯ ಪಕ್ಕದಲ್ಲಿರುವ ಕಮರಿಪೇಟೆ ಪೊಲೀಸ್ ಠಾಣೆಯ ಸದ್ಯದ ಸ್ಥಿತಿ. ಈ ಠಾಣೆ ನಿರ್ಮಾಣವಾಗಿ 15 ವರ್ಷಗಳಾಗಿವೆ. ಕಟ್ಟಡ ಗಟ್ಟಿಮುಟ್ಟಾಗಿದೆ. ಆದರೆ, ರಾಜಕಾಲುವೆ ಮೇಲೆ ನಿರ್ಮಾಣದಿಂದ ಸಮಸ್ಯೆ ಸೃಷ್ಟಿಯಾಗಿದೆ. ಕಾಲುವೆಯ ತಳಭಾಗ ಶಿಥಿಲ ಆಗಿದ್ದಲ್ಲದೆ, ಪಕ್ಕದಲ್ಲೇ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಸಹ ರಾಜಕಾಲುವೆ ಮೇಲೆಯೇ ಇದೆ. ಪರಿಣಾಮ ಭಾರವಾದ ವಾಹನ ರಸ್ತೆಯಲ್ಲಿ ಸಂಚರಿಸಿದರೆ, ಕಾಲುವೆ ತಡೆಗೋಡೆ ಅಲುಗಾಡಿ ಪೊಲೀಸ್ ಠಾಣೆಯ ಕಟ್ಟಡವೂ ಅಲುಗಾಡುತ್ತದೆ.
ಹೌದು.. ಒಂದು ವರ್ಷದ ಈಚೆಗೆ ಠಾಣೆಯ ಕಟ್ಟಡ ಜಾಸ್ತಿ ಅಲುಗಾಡಲು ಶುರುವಾಗಿದೆ. ರಾಷ್ಟ್ರೀಯ ಹೆದ್ದಾರಿ ಹಾಗೂ ಹುಬ್ಬಳ್ಳಿ ನಗರಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿರುವುದರಿಂದ ದಿನಕ್ಕೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ಸರಕು ತುಂಬಿದ ಬೃಹತ್ ವಾಹನಗಳು ಠಾಣೆ ಎದುರು ಸಂಚರಿಸುವಾಗ, ಮುಂಜಾಗ್ರತೆಯಾಗಿ ಸಿಬ್ಬಂದಿ ಹೊರಗೆ ಬರುತ್ತಾರೆ. ಇಷ್ಟು ಸಮಸ್ಯೆ ಇದ್ದರೂ ಇದುವರೆಗೂ ಸ್ಥಳಾಂತರ ಭಾಗ್ಯ ಕೂಡಿ ಬಂದಿಲ್ಲ.
ಇನ್ನೂ ಪಾಲಿಕೆಯು ಸಾಮಾನ್ಯ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡು ಸ್ಥಳಾಂತರಕ್ಕೆ ಸೂಚನೆ ನೀಡಲಾಗಿದೆ. ಪಾಲಿಕೆಯಲ್ಲಿ ನಿರ್ಧಾರ ಕೈಗೊಂಡು ಸುಮಾರು ದಿನಗಳೇ ಕಳೆದರೂ ಇದುವರೆಗೂ ಯಾವುದೇ ರೀತಿಯಲ್ಲಿ ಸ್ಥಳಾಂತರಕ್ಕೆ ಮುಹೂರ್ತ ಫಿಕ್ಸ್ ಆಗಿಲ್ಲ. ಪೊಲೀಸ್ ಠಾಣೆ ರಾಜಕಾಲುವೆ ಮೇಲೆ ಠಾಣೆ ನಿರ್ಮಾಣವಾಗಿದ್ದು, ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಸಮಸ್ಯೆಯಾಗುತ್ತಿದೆ. ಕೆಳಗಡೆ ಹೂಳು, ಕಸ ಸಿಲುಕಿಕೊಳ್ಳುತ್ತಿದ್ದು, ಅದರಿಂದ ನಾಲಾ ತುಂಬಿ ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗುತ್ತದೆ. 2024ರ ಮೇ 15ರಂದು ಜಿಲ್ಲಾಧಿಕಾರಿ, ಆಯುಕ್ತರು, ಎಂಜಿನಿಯರ್‌ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳಾಂತರ ಕುರಿತು ಮೌಖಿಕ ಆದೇಶ ನೀಡಿದ್ದಾರೆ. ಇನ್ನಾದರೂ ಈ ಬಗ್ಗೆ ಕಾಳಜಿ ವಹಿಸಬೇಕಿದೆ.
ವರದಿ: ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
Kshetra Samachara
21/12/2024 01:20 pm