ಧಾರವಾಡ: ಇತ್ತೀಚೆಗಷ್ಟೇ ಧಾರವಾಡದ ಪ್ರಸಿದ್ಧ ಕೆಲಗೇರಿ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದ್ದ ಉಪಲೋಕಾಯುಕ್ತ ನ್ಯಾಯಮೂರ್ತಿ ಫಣೀಂದ್ರ ಅವರು ಕೆಲಗೇರಿ ಕೆರೆಯ ಅವಸ್ಥೆ ಕಂಡು ಬೇಸರ ವ್ಯಕ್ತಪಡಿಸಿದ್ದರು.
20 ದಿನಗಳ ಒಳಗಾಗಿ ಈ ಕೆರೆಯಲ್ಲಿ ಬೆಳೆದ ಅಂತರಗಂಗೆಯನ್ನು ತೆಗೆದು ಹಾಕಬೇಕು, ಕೆರೆಯ ಸುತ್ತ ಬೆಳೆದ ಗಿಡ, ಗಂಟಿಗಳನ್ನು ತೆರವುಗೊಳಿಸಿ, ವಾಕಿಂಗ್ ಪಾತ್‌ನಲ್ಲಿ ಬಿದ್ದಿರುವ ಮದ್ಯದ ಬಾಟಲಿಗಳನ್ನು ತೆಗೆದು ಹಾಕಿ ಸ್ವಚ್ಛಗೊಳಿಸಿ ವರದಿ ನೀಡುವಂತೆ ಸೂಚಿಸಿದ್ದರು. 20 ದಿನಗಳಾದರೂ ಈ ಕೆರೆಯ ಪರಿಸ್ಥಿತಿ ಮೊದಲಿನಂತೆಯೇ ಇದೆ.
ಕೆರೆಯ ಸದ್ಯದ ಸ್ಥಿತಿ ನೋಡಿ ಆ ಬಗ್ಗೆ ವರದಿ ಸಲ್ಲಿಸುವಂತೆ ಉಪಲೋಕಾಯುಕ್ತರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಪಿ.ಎಫ್.ದೊಡ್ಡಮನಿ ಅವರಿಗೆ ಸೂಚಿಸಿದ್ದರಿಂದ ಇಂದು ನ್ಯಾಯಾಧೀಶರಾದ ದೊಡ್ಡಮನಿ ಅವರು ಕೆಲಗೇರಿ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೆರೆಯ ಬೇರೆ ಬೇರೆ ಭಾಗಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ ನ್ಯಾಯಾಧೀಶರು, ಕೆರೆ ಇನ್ನೂ ಸ್ವಚ್ಛವಾಗದೇ ಇರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದರು. ಕೆರೆಯಲ್ಲಿ ಅಂತರಗಂಗೆ ಹಾಗೇ ಇದೆ. ವಾಕಿಂಗ್ ಪಾತ್‌ನಲ್ಲಿ ಮದ್ಯದ ಬಾಟಲಿಗಳು ಬಿದ್ದಿವೆ. ಎಲ್ಲಿ ಬೇಕೆಂದರಲ್ಲಿ ಕಸ ಚೆಲ್ಲಾಡಿದೆ. ಗಿಡ, ಗಂಟಿಗಳು ಹಾಗೇ ಇವೆ.
ಇದನ್ನೆಲ್ಲ ನೋಡಿದರೆ ಕೃಷಿ ವಿಶ್ವವಿದ್ಯಾಲಯದವರು ಇದರ ನಿರ್ವಹಣೆಯನ್ನೇ ಮಾಡುತ್ತಿಲ್ಲ ಎಂಬುದು ಗೊತ್ತಾಗುತ್ತದೆ. ಉಪಲೋಕಾಯುಕ್ತರು ಹೇಳಿದ್ದರಿಂದ ಇಲ್ಲಿಗೆ ಬಂದು ಪರಿಸ್ಥಿತಿ ಅವಲೋಕಿಸಲಾಗಿದೆ. ಸದ್ಯದ ಈ ಕೆರೆಯ ಪರಿಸ್ಥಿತಿ ಹೇಗಿದೆಯೋ ಅದೇ ರೀತಿ ವರದಿ ಸಲ್ಲಿಸಲಾಗುವುದು ಎಂದು ನ್ಯಾಯಾಧೀಶರು ತಿಳಿಸಿದರು.
Kshetra Samachara
19/12/2024 07:29 pm