ಹುಬ್ಬಳ್ಳಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವ ಆರೋಪದ ಬೆನ್ನಲ್ಲೇ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಜೈ ಭೀಮರಾವ್ ಯುವ ಸಂಘಟನೆಯು ಕೇಂದ್ರ ಸಚಿವ ಅಮಿತ್ ಶಾ ಪ್ರತಿಕೃತಿ ದಹನ ಮಾಡುವ ಮೂಲಕ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಸಂಸತ್ ನಲ್ಲಿ ಅಮಿತ್ ಶಾ ಅಂಬೇಡ್ಕರ್ ವಿರೋಧಿ ಹೇಳಿಕೆ ನೀಡಿದ್ದಾರೆ. ಅಂಬೇಡ್ಕರ್ ಹೆಸರನ್ನ ಹೇಳಿದಷ್ಟು ಸಾರಿ ದೇವರ ಹೆಸರನ್ನು ಹೇಳಿದ್ದರೇ ಏಳು ಜನ್ಮಕ್ಕೆ ಸ್ವರ್ಗ ಸಿಕ್ತಿತ್ತು ಎಂದು ಹೇಳಿದ್ದಾರೆ. ಆ ಮೂಲಕ ಅಂಬೇಡ್ಕರ್ ಗೆ ಅಪಮಾನ ಮಾಡಿದ್ದಾರೆ ಎಂದು ಕಿಡಿ ಕಾರಿದ ಪ್ರತಿಭಟನಾಕಾರರು, ಅಮಿತ್ ಶಾ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಅಮಿತ್ ಶಾ ಅವರನ್ನು ಗೃಹ ಖಾತೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಇನ್ನೂ ಹುಬ್ಬಳ್ಳಿಯ ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೂಡಲೇ ಕೇಂದ್ರ ಸಚಿವ ಅಮಿತ್ ಶಾ ಬಹಿರಂಗವಾಗಿ ಕ್ಷಮೆಯಾಚನೆ ಮಾಡಬೇಕು. ಇಲ್ಲವಾದರೇ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ. ನಮ್ಮ ಜೀವ ಹೋದರೂ ಚಿಂತೆಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಅನ್ವರ್ ಸೌದಾಗರ್, ಸಮೀರ್, ಬನ್ನೂರ್ ಫಾರೂಕ ಶೇಕ್, ಸಾಧಿಕ ತಾಜಗೌಕರ್, ಮುಜಾಫರ್ ಬಹದ್ದೂರ್ ಸಿದ್ದಾರ್ಥ್ ಗುಂಡ್ಲುಪಲಿ, ಅಜರ್ ಮುಲ್ಲಾ, ಶಾನು ಖಾನ್, ಅಬ್ಜಲ್ ಕರಜಿಗಿ, ರೋಶನ್ ಬೆಳಗಾಂ ಭಾಗಿಯಾಗಿದ್ದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
21/12/2024 03:59 pm