ವಾಷಿಂಗ್ಟನ್ ಡಿಸಿ: ಅಮೆರಿಕ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನವೇ ಡೊನಾಲ್ಡ್ ಟ್ರಂಪ್ ಭಾರತಕ್ಕೆ ತೆರಿಗೆ ಶಾಕ್ ನೀಡಿದ್ದಾರೆ.
ಕೆಲವು ಅಮೆರಿಕನ್ ಉತ್ಪನ್ನಗಳ ಮೇಲೆ ಭಾರತ ಹೆಚ್ಚಿನ ಆಮದು ಸುಂಕವನ್ನು ವಿಧಿಸಿದೆ. ಇದಕ್ಕೆ ಪ್ರತೀಕಾರ ಎಂಬಂತೆ ನಾವು ಕೂಡ ಭಾರತೀಯ ಉತ್ಪನ್ನಗಳಿಗೆ ಹೆಚ್ಚಿನ ತೆರಿಗೆ ವಿಧಿಸುತ್ತೇವೆ ಎಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಚೀನಾದೊಂದಿಗಿನ ಸಂಭಾವ್ಯ ವ್ಯಾಪಾರ ಒಪ್ಪಂದದ ಪ್ರಶ್ನೆಗೆ ಉತ್ತರಿಸಿರುವ ಟ್ರಂಪ್, ಭಾರತವು ನಮ್ಮ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸಿದರೆ ಅಷ್ಟೇ ಪ್ರಮಾಣದ ತೆರಿಗೆಯನ್ನು ನಾವು ವಿಧಿಸುತ್ತೇವೆ. ಬಹುತೇಕ ಎಲ್ಲ ಸಂದರ್ಭಗಳಲ್ಲಿ ಅವರು ನಮ್ಮ ಮೇಲೆ ಹೆಚ್ಚಿನ ತೆರಿಗೆ ವಿಧಿಸುತ್ತಿದ್ದಾರೆ. ಆದರೆ, ನಾವು ಅವರ ಮೇಲೆ ತೆರಿಗೆ ವಿಧಿಸುತ್ತಿಲ್ಲ. ಇನ್ಮೇಲೆ ನಾವು ಕೂಡ ಭಾರತದಂತೆ ಸುಂಕ ವಿಧಿಸುತ್ತೇವೆ ಎಂಬ ಎಚ್ಚರಿಕೆ ನೀಡಿದ್ದಾರೆ.
ಡೊನಾಲ್ಟ್ ಟ್ರಂಪ್ ಅನಿಸಿಕೆಯನ್ನು ಪುನರುಚ್ಚರಿಸಿದ ಅವರ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್, ‘ಅನುರೂಪತೆ (reciprocity) ಎಂಬುದು ಟ್ರಂಪ್ ಆಡಳಿತದ ಒಂದು ಪ್ರಮುಖ ನೀತಿಯಾಗಿರುತ್ತದೆ. ನೀವು ನಮ್ಮನ್ನು ಹೇಗೆ ನಡೆಸಿಕೊಳ್ಳುತ್ತೀರೋ, ನಾವೂ ಕೂಡ ನಿಮ್ಮನ್ನು ಹಾಗೇ ನಡೆಸಿಕೊಳ್ಳುತ್ತೇವೆ’ ಎಂದು ತಿಳಿಸಿದ್ದಾರೆ.
PublicNext
18/12/2024 09:56 pm