ಕೋಲ್ಕತಾ: ವಾರಕ್ಕೆ 70 ಗಂಟೆ ದುಡಿಮೆ ಕುರಿತಾದ ಹೇಳಿಕೆಯಿಂದ ತೀವ್ರ ಚರ್ಚೆಗೀಡಾಗಿದ್ದ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರು, ತಮ್ಮ ನಿಲುವನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.
ಕೋಲ್ಕತಾದಲ್ಲಿ ನಡೆದ 'ಇಂಡಿಯನ್ ಚೇಂಬರ್ ಆಫ್ ಕಾಮರ್ಸ್' ಶತಮಾನೋತ್ಸವದಲ್ಲಿ ಮಾತನಾಡಿದ ನಾರಾಯಣ ಮೂರ್ತಿ, ಭಾರತದ ಜಾಗತಿಕ ಸ್ಥಿತಿಯನ್ನು ಉನ್ನತ ಮಟ್ಟಕ್ಕೇರಿಸಲು ಯುವ ಜನರು ಕಠಿಣ ಶ್ರಮ ವಹಿಸಬೇಕು ಎಂದು ಸಲಹೆ ನೀಡಿದರು.
'ನಾವು ಉತ್ತಮ ಮಟ್ಟಕ್ಕೆ ಹೋಗಲಿದ್ದೇವೆ ಹಾಗೂ ಅತ್ಯುತ್ತಮ ಜಾಗತಿಕ ಕಂಪೆನಿಗಳ ಜತೆ ನಿಲ್ಲಲಿದ್ದೇವೆ ಎಂದು ಇನ್ಫೋಸಿಸ್‌ನಲ್ಲಿ ನಾನು ಹೇಳಿದ್ದೆ, ನಾವು ಅತ್ಯುತ್ತಮ ಜಾಗತಿಕ ಕಂಪೆನಿಗಳ ಜತೆ ನಮ್ಮನ್ನು ಹೋಲಿಕೆ ಮಾಡಿದ ಬಳಿಕ, ನಾವು ಭಾರತೀಯರು ಮಾಡುವ ಕೆಲಸ ಸಾಕಷ್ಟಿರುತ್ತದೆ, ನಾವು ನಮ್ಮ ಮಹತ್ವಾಕಾಂಕ್ಷೆಗಳನ್ನು ಎತ್ತರದಲ್ಲಿ ಇರಿಸಿಕೊಳ್ಳಬೇಕು ಎಂದರು.
800 ಮಿಲಿಯನ್ ಭಾರತೀಯರು ಉಚಿತ ಪಡಿತರವನ್ನು ಪಡೆಯುತ್ತಿದ್ದಾರೆ. ಅಂದರೆ 800 ಮಿಲಿಯನ್ ಭಾರತೀಯರು ಬಡತನದಲ್ಲಿದ್ದಾರೆ. ನಾವು ಶ್ರಮವಹಿಸಿ ಕೆಲಸ ಮಾಡದಿದ್ದರೆ, ಹೇಗೆ? ಎಂದು ನಾರಾಯಣ ಮೂರ್ತಿ ಪ್ರಶ್ನಿಸಿದ್ದಾರೆ.
ನಾನು ನನ್ನ ವೃತ್ತಿ ಜೀವನದ ಆರಂಭದಲ್ಲಿ ದಿನಕ್ಕೆ 14 ಗಂಟೆ ಕೆಲಸ ಮಾಡುತ್ತಿದ್ದೆ, ಬೆಳಿಗ್ಗೆ 6.30ಕ್ಕೆ ಕಚೇರಿಯಲ್ಲಿ ಹಾಜರಿರುತ್ತಿದ್ದೆ. ರಾತ್ರಿ 8.30ಕ್ಕೆ ಮನೆಗೆ ಹೊರಡುತ್ತಿದ್ದೆ, ಸಮರ್ಪಣೆಯಿಂದ ಕೆಲಸ ಮಾಡುತ್ತಿದ್ದೆ, ಕಠಿಣ ಪರಿಶ್ರಮವು ನಮ್ಮ ಸಂಸ್ಕೃತಿಯಲ್ಲೇ ಇದೆ. ನಾನು ಕೋಲ್ಕತ್ತಾದ ಬಗ್ಗೆ ಯೋಚಿಸಿದಾಗ, ನಾನು ರವೀಂದ್ರನಾಥ ಠಾಗೋರ್, ಸತ್ಯಜಿತ್ ರೇ, ಸುಭಾಷ್ ಚಂದ್ರ ಬೋಸ್, ಅಮರ್ತ್ಯ ಸೇನ್ ಮತ್ತು ಇತರ ವ್ಯಕ್ತಿಗಳನ್ನು ನೆನಪಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
PublicNext
16/12/2024 04:31 pm