ನವದೆಹಲಿ: ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಒಕ್ಕೂಟ ಪ್ರಚಂಡ ಬಹುಮತದಿಂದ ಅಧಿಕಾರಕ್ಕೆ ಬಂದ ನಂತರ, ಬ್ಯಾಕ್ ಡೋರ್‌ನಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆಯೇ? ನಾಲ್ಕು ದಿನಗಳ ಅಂತರದಲ್ಲಿ ಮೂರು ವಿದ್ಯಮಾನಗಳು ಈ ರೀತಿಯ ಅನುಮಾನ ಬರುವಂತೆ ಮಾಡಿದೆ.
ಲೋಕಸಭೆಯಲ್ಲಿ ಒಳ್ಳೆಯ ಸಾಧನೆ ಮಾಡಿದ್ದ ಮಹಾ ವಿಕಾಸ್ ಅಘಾಡಿ ವಿಧಾನಸಭೆಯಲ್ಲಿ ಮುಗ್ಗರಿಸಿರುವುದು ಗೊತ್ತೇ ಇದೆ. ಸರ್ಕಾರ ರಚನೆಯ ಬಳಿಕ ಮಹಾರಾಷ್ಟ್ರದ ರಾಜಕೀಯ ಹೊಸ ಮಗ್ಗಲಿಗೆ ಹೊರಳಿದಂತೆ ಕಾಣುತ್ತಿದೆ. ಕಳೆದ ಭಾನುವಾರ (ಡಿಸೆಂಬರ್ 15), ಬಿಜೆಪಿ ಮೈತ್ರಿಕೂಟದ ಭಾಗವಾಗಿರುವ ರಾಜ್ ಠಾಕ್ರೆ, ತಮ್ಮ ಸಹೋದರ ಸಂಬಂಧಿಯಾಗಿದ್ದರೂ, ರಾಜಕೀಯ ಎದುರಾಳಿಯಾಗಿರುವ ಮಾಜಿ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರನ್ನು ಭೇಟಿಯಾಗಿದ್ದರು. ಉದ್ದವ್ ಠಾಕ್ರೆ ಅವರ ಪತ್ನಿಯ ಕಡೆ, ಮದುವೆ ಕಾರ್ಯಕ್ರಮಕ್ಕೆ ರಾಜ್ ಠಾಕ್ರೆ ಹೋಗಿದ್ದರೂ, ಅದಕ್ಕೆ ರಾಜಕೀಯ ಬಣ್ಣ ಬಂದಿತ್ತು.
ವಿಪಕ್ಷ ನಾಯಕರು ಅಧಿಕಾರದಲ್ಲಿರುವವರ ಬಗ್ಗೆ ಮೃದು ಧೋರಣೆ ತಳೆದಂತೆ ಕಾಣುತ್ತಿದೆ. ಮೊನ್ನೆಯಷ್ಟೇ ಸಿಎಂ ದೇವೆಂದ್ರ ಫಡ್ನವೀಸ್ ಅವರನ್ನು ಉದ್ಧವ್ ಠಾಕ್ರೆ ಭೇಟಿಯಾದರೆ, ನಿನ್ನೆ (ಗುರುವಾರ) ಎನ್‌ಸಿಪಿ ನಾಯಕ ಶರಾದ್ ಪವಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ.
ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಸತ್ತಿನ ನಂತರ ಕಚೇರಿಯಲ್ಲಿ ಭೇಟಿಯಾದರು. ಪಶ್ಚಿಮ ಮಹಾರಾಷ್ಟ್ರದ ಫಾಲ್ತಾನ್‌ನ ರೈತರೊಂದಿಗೆ ಭೇಟಿಯಾದ ಪವಾರ್ ಪ್ರಧಾನಿ ಮೋದಿಗೆ ದಾಳಿಂಬೆ ಹಣ್ಣುಗಳನ್ನು ನೀಡಿದರು. ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಸ್ಪೀಕರ್ ರಾಹುಲ್ ನಾರ್ವೇಕರ್ ಅವರನ್ನು ಭೇಟಿ ಮಾಡಿದ ಮರುದಿನವೇ ಪ್ರಧಾನಿ ಮೋದಿ ಅವರನ್ನು ಪವಾರ್ ಭೇಟಿ ಮಾಡಿರುವುದು ಚರ್ಚೆಗೆ ಆಸ್ಪದ ನೀಡಿದೆ.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಪಕ್ಷ ನಾಯಕನ ಸ್ಥಾನ ಪಡೆಯುವ ಸಲುವಾಗಿ ಉದ್ಧವ್ ಠಾಕ್ರೆ ಹಾಗೂ ಶರಾದ್ ಪವಾರ್ ಬಿಜೆಪಿ ಉನ್ನತ ನಾಯಕರನ್ನು ಭೇಟಿ ಮಾಡಿದ್ದಾರೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಇನ್ನು ಚಳಿಗಾಲದಲ್ಲಿ ಅನೇಕ ಮಹತ್ವದ ಮಸೂದೆಗಳು ಮಂಡನೆಯಾಗುತ್ತಿದ್ದು, ಶರಾದ್ ಪವಾರ್ ಪಕ್ಷ ಹಾಗೂ ಉದ್ಧವ್ ಠಾಕ್ರೆ ಪಕ್ಷ ಎನ್ಡಿಎ ಅನ್ನು ಬೆಂಬಲಿಸುವ ಬಗ್ಗೆಯೂ ಚರ್ಚೆ ನಡೆದಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಈ ಎರಡೂ ಪಕ್ಷಗಳು ಕೇಂದ್ರ ಸರ್ಕಾರ ಮಸೂದೆಗಳಿಗೆ ಬೆಂಬಲ ನೀಡಿದರೆ ಲೆಕ್ಕಾಚಾರ ಸಂಪೂರ್ಣ ಬದಲಾಗಲಿದೆ.
ವಿರೋಧ ಪಕ್ಷ ಮಹಾ ವಿಕಾಸ್ ಅಘಾಡಿ (MVA) ಇತ್ತೀಚೆಗೆ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದ್ದು, ಕೇವಲ 46 ಸ್ಥಾನಗಳನ್ನು ಹೊಂದಿದೆ. ಶಿವಸೇನೆ (ಯುಬಿಟಿ) 20 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು, ಕಾಂಗ್ರೆಸ್ 16 ಮತ್ತು ಎನ್‌ಸಿಪಿ (ಎಸ್‌ಪಿ) ಕ್ರಮವಾಗಿ ಕೇವಲ 10 ಸ್ಥಾನಗಳಲ್ಲಿದೆ.
ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಪಡೆಯಲು ಯಾವುದೇ ಪಕ್ಷವು ಸಾಕಷ್ಟು ಸ್ಥಾನಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಮಹಾರಾಷ್ಟ್ರ ವಿಧಾನಸಭೆಯು ಒಟ್ಟು 288 ಸ್ಥಾನಗಳನ್ನು ಹೊಂದಿದೆ. ಈ ಪೈಕಿ, ಒಂದು ಪಕ್ಷವು ವಿಪಕ್ಷ ನಾಯಕನ ಸ್ಥಾನವನ್ನು ಪಡೆಯಲು ಕನಿಷ್ಠ 28 ಶಾಸಕರನ್ನು ಹೊಂದಿರಬೇಕು.
PublicNext
19/12/2024 01:08 pm