ಮಂಗಳೂರು: ನಗರ ಭಾಗದಲ್ಲಿ ಕಾರ್ಯನಿರ್ವಹಿಸುವ ರೈಲ್ವೆ ಲೈನ್‌ಗಳು ಪ್ರಸ್ತುತ ದಕ್ಷಿಣ ರೈಲ್ವೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದರ ಬದಲಿಗೆ ಈ ರೈಲ್ವೆ ಲೈನ್‌ಗಳನ್ನು ನೈರುತ್ಯ ರೈಲ್ವೆಯಡಿಯಲ್ಲಿ ಕಾರ್ಯನಿರ್ವಹಿಸುವ ಪ್ರಸ್ತಾವನೆಯನ್ನು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಸಂಸತ್ತಿನಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮುಂದಿಟ್ಟಿದ್ದಾರೆ.
ಸಂಸತ್‌ನ ಚಳಿಗಾಲದ ಅಧಿವೇಶದಲ್ಲಿ ಬುಧವಾರ ಪ್ರಶ್ನೋತ್ತರ ವೇಳೆಯಲ್ಲಿ ಬ್ರಿಜೇಶ್ ಚೌಟ, ಕರಾವಳಿ ಸೇರಿದಂತೆ ಮಂಗಳೂರು-ಬೆಂಗಳೂರು ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಸಂಚಾರ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ದಕ್ಷಿಣ ರೈಲ್ವೆ ವಿಭಾಗದಲ್ಲಿರುವ ಮಂಗಳೂರು ನಗರ ಭಾಗದ ರೈಲ್ವೆ ಲೈನ್‌ಗಳನ್ನು ನೈಋತ್ಯ ರೈಲ್ವೆ ವ್ಯಾಪ್ತಿಗೆ ತರುವ ಪ್ರಸ್ತಾಪ ರೈಲ್ವೆ ಇಲಾಖೆ ಬಳಿ ಇದೆಯೇ ? ಇದಕ್ಕೆ ಯಾವ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಂಸತ್ತಿನಲ್ಲಿ ಇಂದು ರೈಲ್ವೆ ಸಚಿವರ ಗಮನಸೆಳೆದಿದ್ದಾರೆ.
ಮಂಗಳೂರು-ಬೆಂಗಳೂರು ಅತ್ಯಂತ ಪ್ರಮುಖ ರೈಲ್ವೆ ಸಂಪರ್ಕವಾಗಿದ್ದು, ಶಿರಾಡಿ ಘಾಟಿಯಲ್ಲಿ ಹಳಿ ವಿಸ್ತರಣೆಗೆ ಸಂಬಂಧಿಸಿದಂತೆ ಸಾಧಕ-ಬಾಧಕಗಳ ಅಧ್ಯಯನ ವರದಿ ಯಾವ ಹಂತದಲ್ಲಿದೆ. ಶಿರಾಡಿ ಘಾಟಿಯಲ್ಲಿ ಹೊಸ ಹಳಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಧ್ಯಯನ ವರದಿ ಪ್ರಗತಿ ಈಗ ಯಾವ ಹಂತ ತಲುಪಿದೆ. ಜತೆಗೆ ಮಂಗಳೂರು ಸೆಂಟ್ರಲ್ ಹಾಗೂ ಮಂಗಳೂರು ಜಂಕ್ಷನ್ ವ್ಯಾಪ್ತಿಯು ದಕ್ಷಿಣ ರೈಲ್ವೆಗೆ ಸೇರಿದ್ದು, ಉಳಿದ ಬಹುತೇಕ ಮಂಗಳೂರು-ಬೆಂಗಳೂರು ರೈಲ್ವೆ ವ್ಯಾಪ್ತಿ ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿದೆ. ಆದರೆ, ಕರಾವಳಿಯ ಸಮಗ್ರ ಅಭಿವೃದ್ಧಿಗೆ ಪೂರಕವಾಗಿರುವ ಈ ಮಾರ್ಗ ಒಂದೇ ವಲಯದ ವ್ಯಾಪ್ತಿಗೆ ಬಂದರೆ ಅಭಿವೃದ್ಧಿ ದೃಷ್ಟಿಯಿಂದ ಹಾಗೂ ಆಡಳಿತಾತ್ಮಕವಾಗಿ ಹೆಚ್ಚಿನ ಅನುಕೂಲವಾಗಲಿದೆ. ಹೀಗಾಗಿ, ಮಂಗಳೂರು ನಗರ ಭಾಗದ ರೈಲ್ವೆ ಲೈನ್‌ಗಳನ್ನು ನೈಋತ್ಯ ವಲಯಕ್ಕೆ ಸೇರಿಸುವಲ್ಲಿ ಸಚಿವಾಲಯದ ಮುಂದೆ ಪ್ರಸ್ತಾವನೆ ಬಂದಿದೆಯೇ ಎಂದು ಸಂಸದರು ಸದನದಲ್ಲಿ ಕೇಳಿದ್ದಾರೆ.
ಇದಕ್ಕೆ ಉತ್ತರಿಸಿರುವ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರು, ಮಂಗಳೂರು-ಬೆಂಗಳೂರು ರೈಲ್ವೆ ಮಾರ್ಗದ ನಿರ್ಮಾಣವನ್ನು ರಾಜ್ಯ ಸರ್ಕಾರ ಹಾಗೂ ರೈಲ್ವೆ ಸಚಿವಾಲಯದ ಜಂಟಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಆದರೆ, ಈ ಸಹಭಾಗಿತ್ವದಲ್ಲಿ ರಾಜ್ಯ ಸರ್ಕಾರದ ಪಾಲು ಬರಬೇಕಿದೆ. ಹೀಗಿರುವಾಗ, ರಾಜ್ಯ ಸರ್ಕಾರದ ಅನುದಾನದ ಪಾಲು ಬಂದರೆ ಈ ಮಾರ್ಗದ ಮುಂದಿನ ಹಂತದ ಅಭಿವೃದ್ಧಿ ಕಾಮಗಾರಿಗಳನ್ನು ಮುಂದುವರಿಸುವುದಕ್ಕೆ ಸಾಧ್ಯವಾಗಲಿದೆ. ಆದರೆ, ಇಂದಿನ ಪ್ರಶ್ನೋತ್ತರ ಕಲಾಪ ಮುಕ್ತಾಯಗೊಂಡಿರುವ ಕಾರಣ ಸಂಸದರು ಪ್ರಸ್ತಾಪಿಸಿರುವ ಮಂಗಳೂರನ್ನು ನೈಋತ್ಯ ವಲಯಕ್ಕೆ ಸೇರಿಸುವುದು ಸೇರಿದಂತೆ ಉಳಿದ ವಿಚಾರಗಳ ಬಗ್ಗೆ ವಿವರವಾದ ಉತ್ತರವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ರಾಜ್ಯದಲ್ಲಿ 01.04.2024 ರಂತೆ, ಒಟ್ಟು 3,840 ಕಿಮೀ ಉದ್ದದ 31 ಯೋಜನೆಗಳು (21 ಹೊಸ ಮಾರ್ಗಗಳು ಮತ್ತು 10 ದ್ವಿಗುಣಗೊಳಿಸುವಿಕೆ) 47,016 ಕೋಟಿ ರೂ. ವೆಚ್ಚವಾಗಿದ್ದು, ರಾಜ್ಯದಲ್ಲಿ ವಿವಿಧ ಸಂಪೂರ್ಣವಾಗಿ/ಭಾಗಶಃವಾದ ಯೋಜನೆ ಅನುಷ್ಠಾನದ ಹಂತಗಳಲ್ಲಿದೆ. ಅದರಲ್ಲಿ 1,302 ಕಿಮೀ ಉದ್ದವನ್ನು ಕಾರ್ಯಾರಂಭ ಮಾಡಲಾಗಿದೆ ಮತ್ತು ಮಾರ್ಚ್ 2024 ರವರೆಗೆ 17,383 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಹೇಳಿದರು.
PublicNext
12/12/2024 02:41 pm