ಶಿವಮೊಗ್ಗ: ಜನಪದ ಕಲೆಗಳು ನಮ್ಮ ಮೂಲ ಸಂಸ್ಕೃತಿಯ ಬೇರುಗಳು ಎಂದು ಜನಪದ ಗಾಯಕ ಮಹದೇವಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿವಿಧ ಪ್ರಕಾರದ ಜನಪದ ಕಲೆಗಳು ನಮ್ಮ ಬೇರಾಗಿದ್ದು ಅವನ್ನು ಕಲಿಯುವುದು ಜ್ಞಾನ, ಗೌರವ, ಹಣ ಗಳಿಕೆ ಎಲ್ಲಕ್ಕೂ ದಾರಿ ಎಂದು ಜನಪದ ಹಾಡುಗಾರ ಮಳವಳ್ಳಿ ಮಹದೇವಸ್ವಾಮಿ ಸಲಹೆ ನೀಡಿದ್ದಾರೆ.
ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಪಠ್ಯೇತರ ಚಟುವಟಿಕೆ ವಿಭಾಗದ ವತಿಯಿಂದ ವಿಶ್ವವಿದ್ಯಾಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ 'ಸಹ್ಯಾದ್ರಿ ಉತ್ಸವ- 2024 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ್ದಾರೆ. ಜನಪದ ಸಾಹಿತ್ಯ, ಹಾಡನ್ನು ಸಿನಿಮಾದವರು ಬಳಸಿದ್ದಾರೆ, ಆದರೆ ಸಿನಿಮಾದಿಂದ ಜನಪದ ಏನನ್ನೂ ಪಡೆದಿಲ್ಲ. ಜನಪದ ಸಶಕ್ತ ಮಾಧ್ಯಮ ಅದನ್ನು ಕಲಿಯಿರಿ ಎಂದರು.
ಮತ್ತೋರ್ವ ಅತಿಥಿ ನಟಿ ಅದಿತಿ ಶೆಟ್ಟಿ ಮಾತನಾಡಿ, ಕಾಲೇಜು ದಿನಗಳಲ್ಲಿ ಕಲಿಯುವ ಕಲೆ, ಗಳಿಸಿದ ಜ್ಞಾನ, ರೂಪಿಸಿಕೊಂಡ ಮೌಲ್ಯಗಳು ಇಂದಿಗೂ ಸಿನಿಮಾರಂಗದಲ್ಲಿ ನಮಗೆ ಸಹಾಯಕವಾಗಿವೆ. ಹೀಗಾಗಿ ಶಿಕ್ಷಣ ಮತ್ತು ಶಿಕ್ಷಣದ ಸಂದರ್ಭದ ಹಲವು ಬಗೆಯ ಕಲಿಕೆ ಮುಖ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕುಲಸಚಿವ ಎ ಎಲ್ ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ. ಎಂ ಎಸ್ ಗೋಪಿನಾಥ್, ಸಂಚಾಲಕ ಡಾ. ನೆಲ್ಲಿಕಟ್ಟೆ ಸಿದ್ದೇಶ್ ಮಾತನಾಡಿದರು. ವಿವಿಯ ವಿವಿಧ ವಿಭಾಗಗಳ ಅಧ್ಯಾಪಕರು, ವಿದ್ಯಾರ್ಥಿಗಳು, ವಿವಿ ವ್ಯಾಪ್ತಿಯ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು, ಸ್ಪರ್ಧಾಳುಗಳು ಉಪಸ್ಥಿತರಿದ್ದರು.
PublicNext
09/12/2024 10:31 pm