ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೊರಬ: ಹೋರಿ ಬೆದರಿಸುವ ಹಬ್ಬದಲ್ಲಿ ಸಂಪ್ರದಾಯ ಮತ್ತು ಉತ್ಸಾಹದ ಸಂಭ್ರಮ

ಸೊರಬ: ಮಿಂಚಿನ ಓಟ ಓಡುತ್ತಿದ್ದ ಹೋರಿಗಳು, ಬಲ ಪ್ರದರ್ಶನ ತೋರಲು ಮುಂದಾಗಿದ್ದ ಪೈಲ್ವಾನರು. ಹೋರಿ ಪ್ರೀಯರ ಹರ್ಷೋದ್ಗಾರದ ನಡುವೆ ತಾಲೂಕಿನ ಕುಪ್ಪಗಡ್ಡೆ ಗ್ರಾಮದಲ್ಲಿ ಜನಪದ ಕ್ರೀಡೆ ರಾಜ್ಯ ಮಟ್ಟದ ಹೋರಿ ಬೆದರಿಸುವ ಹಬ್ಬ ಸೋಮವಾರ ವಿಜೃಂಭಣೆಯಿಂದ ಜರುಗಿತು.

ಹೋರಿ ಹಬ್ಬಕ್ಕೆ ಚಾಲನೆ ನೀಡಿದ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಲ್.ಜಿ. ರಾಜಶೇಖರ ಕುಪ್ಪಗಡ್ಡೆ ಮಾತನಾಡಿ, ಜನಪದ ಕ್ರೀಡೆ ಹೋರಿ ಹಬ್ಬವನ್ನು ಉಳಿಸಿ ಬೆಳೆಸಬೇಕು. ಕಮಿಟಿಯ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಹೋರಿ ಮಾಲೀಕರಿಗೆ ತಿಳಿಸಿದರು.

ಮಲೆನಾಡು ಹಾಗೂ ಬಯಲುಸೀಮೆ ಭಾಗದ ಹಬ್ಬವಾಗಿರುವ ಜನಪದ ಕ್ರೀಡೆ ಸಾಂಪ್ರದಾಯಿಕ ಹೋರಿ ಬೆದರಿಸುವ ಹಬ್ಬದ ಅಖಾಡದಲ್ಲಿ ಯಾರ ಕೈಗೂ ಸಿಗದಂತೆ ಓಡುತ್ತಿರುವ ಹೋರಿಗಳನ್ನು ಕಣ್ತುಂಬಿಕೊಳ್ಳಲು ತಾಲೂಕು ಸೇರಿದಂತೆ ನೆರೆಯ ಜಿಲ್ಲೆಗಳಿಂದ ಸಾವಿರಾರು ಹೋರಿ ಹಬ್ಬದ ಅಭಿಮಾನಿಗಳು ಆಗಮಿಸಿದ್ದರು. ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಶರವೇಗದಲ್ಲಿ ಹೋರಿಗಳು ಓಡಿ ಹೋಗುವ ದೃಶ್ಯ ನೋಡುಗರಲ್ಲಿ ಮೈನವಿರೇಳಿಸಿತು.

ಹೋರಿಗಳ ಮಾಲೀಕರು ಹೋರಿಗಳಿಗೆ ವಿವಿಧ ಬಗೆಯ ಜೂಲಗಳನ್ನು ಹೊದಿಸಿ, ಬಣ್ಣ ಬಣ್ಣದ ಟೇಪು, ಬಲೂನುಗಳು ಮತ್ತು ಒಣ ಕೊಬ್ಬರಿ ಕಟ್ಟಿ ಶೃಂಗರಿಸಿದ್ದರು. ಕೊಬ್ಬರಿ ಹೋರಿ, ಆ್ಯಕ್ಷನ್ ಹೋರಿ, ಪೀಪಿ ಹೋರಿ ಹೀಗೆ ವಿವಿಧ ರೀತಿಯಲ್ಲಿ ಹೋರಿಗಳನ್ನು ವಿಂಗಡಿಸಿ ಓಡಿಸಲಾಯಿತು.

ವಿಶೇಷವಾಗಿ ಹಂಸಭಾವಿಯ ಕರ್ನಾಟಕ ನಂದಿ ಹೆಸರಿನ ಹೋರಿಯು 140ಬಾರಿ ಅಖಾಡದಲ್ಲಿ ಓಟ ನಡೆಸಿದ್ದು, ಹೋರಿ ಆಗಮಿಸುತ್ತಿದ್ದಂತೆ ಹೋರಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಅಖಾಡದಲ್ಲಿ ಉತ್ತಮವಾಗಿ ಓಡಿದ ಹೋರಿಗಳು ಹಾಗೂ ಬಲಪ್ರದರ್ಶನ ತೋರಿದ ಪೈಲ್ವಾನರನ್ನು ಸಮಿತಿ ವತಿಯಿಂದ ಗುರುತಿಸಲಾಯಿತು. ಅಖಾಡದ ಎರಡು ಬದಿಯಲ್ಲಿ ಬೇಲಿ ನಿರ್ಮಿಸಿ, ಒಂದೊಂದೆ ಹೋರಿಗಳನ್ನು ಓಡಿಸುವ ಮೂಲಕ ಸಮಿತಿಯವರು ಸುರಕ್ಷತೆಗೆ ಹೆಚ್ಚಿನ ಗಮನ ನೀಡಿದ್ದರು.

ವರದಿ: ಮಧು ರಾಮ್ ಪಬ್ಲಿಕ್ ನೆಕ್ಸ್ಟ್ ಸೊರಬ

Edited By : Somashekar
PublicNext

PublicNext

03/12/2024 11:26 am

Cinque Terre

11.79 K

Cinque Terre

0

ಸಂಬಂಧಿತ ಸುದ್ದಿ