ಶಿವಮೊಗ್ಗ : ಸಮಾಜದಲ್ಲಿ ಹೇಗೆ ಇರಬೇಕು ಎನ್ನುವುದಕ್ಕೆ ರಾಮ ಆದರ್ಶ, ಈ ರೀತಿಯ ಯಾತ್ರೆಗಳ ಮೂಲಕ ಎಲ್ಲರೂ -ರಾಮನ ಗುಣಗಳನ್ನು ಅಳವಡಿಸಿಕೊಳ್ಳಬೇಕು. ರಾಮನಂತೆ ಬದುಕಬೇಕೆಂದು ಆರ್‌ಎಸ್‌ಎಸ್ ಪ್ರಾಂತೀಯ ಪ್ರಮುಖ ಪಟ್ಟಾಭಿರಾಂ ಅಭಿಪ್ರಾಯಪಟ್ಟರು. ನಗರದ ಶುಭಮಂಗಳ ಕಲ್ಯಾಣ ಮಂದಿರದಲ್ಲಿ ಆಯೋಜಿಸಿದ್ದ ರಾಷ್ಟ್ರಭಕ್ತ ಬಳಗದ ಮೂಲಕ ನಗರದ 1650ಕ್ಕೂ ಹೆಚ್ಚು - ಜನ ಯಾತ್ರಾರ್ಥಿಗಳೊಂದಿಗೆ ಯಶಸ್ವಿ ಕಾಶಿ ಮತ್ತು ಅಯೋಧ್ಯೆ ಯಾತ್ರೆ ಪೂರ್ಣಗೊಳಿಸಿದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮತ್ತು ಅವರ ಪುತ್ರ ಕೆ.ಈ. ಕಾಂತೇಶ್, ಶಿವಮೊಗ್ಗ ನಗರದ 1 ಲಕ್ಷ ಮನೆಗಳಿಗೆ ಕಾಶಿ ಮತ್ತು ಅಯೋಧ್ಯೆ ಪ್ರಸಾದದ ಜೊತೆಗೆ ಕಾಶಿ ವಿಶ್ವನಾಥನ ಭಾವ ಚಿತ್ರವಿರುವ ಬೆಳ್ಳಿ ನಾಣ್ಯ ವಿತರಣಾ ಚಾಲನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಂದಿನ ಪೀಳಿಗೆ ರಾಮನ ಆದರ್ಶ ಅಳವಡಿಸಿಕೊಳ್ಳಬೇಕು. ಇದೇ ಉದ್ದೇಶದಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲಾಗಿದೆ. ನಮ್ಮಲ್ಲಿರುವುದನ್ನು ಇನ್ನೊಬ್ಬರ ಜೊತೆ ಹಂಚಿ ತಿನ್ನುವ, ಇತರರ ಕಷ್ಟಕ್ಕೆ ಸ್ಪಂದಿಸುವ, ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು. ಈ ಮುಖಾಂತರ ರಾಮರಾಜ್ಯ ಕಟ್ಟಲು ಕೈಜೋಡಿಸಬೇಕು ಎಂದು ಕರೆ ನೀಡಿದರು.
ಬೆಕ್ಕಿನಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ ಮಾತನಾಡಿ, ಪ್ರಸ್ತುತ- ದಿನಗಳಲ್ಲಿ ಸಮಾಜಕ್ಕೆ ಮಾದರಿಯಾಗಿ ಬದುಕು ನಡೆಸುವುದು ಕಷ್ಟಸಾಧ್ಯವಾದ ಮಾತು. ಇಲ್ಲಿ ಯಾವುದಾದರೂ ಒಂದು ಸಮಸ್ಯೆಯ ಒತ್ತಡಕ್ಕೆ ಸಿಲುಕಿ ಜಂಜಾಟದ ಸುಳಿಯಲ್ಲಿ ಮುಳುಗಿರುತ್ತೇವೆ. ಈ ಎಲ್ಲವನ್ನೂ ಮೆಟ್ಟಿ ನಿಂತು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಪೂರ್ವಜನ್ಮದ ಪುಣ್ಯವಂತಲೇ ಭಾವಿಸಬೇಕು. ಕೆ.ಎಸ್.ಈಶ್ವರಪ್ಪ ಅವರು ಈ ರೀತಿಯ ಸಮಾಜಕ್ಕೆ ಪೂರಕವಾದ ಕಾರ್ಯಗಳನ್ನು ಹಿಂದಿನಿಂದಲೂ ನಡೆಸಿಕೊಂಡು ಬಂದಿದ್ದಾರೆ. ಅಯೋಧ್ಯೆ ಮತ್ತು ಕಾಶಿ ಯಾತ್ರೆ ನಡೆಸುವ ಮೂಲಕ ಮತ್ತಷ್ಟು ಶಕ್ತಿ ಅವರಿಗೆ ಹೆಚ್ಚಿದೆ ಎಂದರು.
ವೇದಿಕೆಯಲ್ಲಿ ಈಶ್ವರಪ್ಪ ಅವರ ಪತ್ನಿ ಶ್ರೀಮತಿ ಜಯಲಕ್ಷ್ಮೀ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಇ. ವಿಶ್ವಾಸ್, ಪ್ರಮುಖರಾದ ವಿನಯಾನಂದ ಸರಸ್ವತಿ ಸ್ವಾಮೀಜಿ, ಮಹಲಿಂಗಯ್ಯ ಶಾಸ್ತ್ರಿ, ಸುವರ್ಣ ಶಂಕರ್, ಲಕ್ಷ್ಮೀ ಶಂಕರ್ ನಾಯ್, ಬಾಲು ಇದ್ದರು.
PublicNext
03/12/2024 07:10 pm