ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ವಿದ್ಯಾಕಾಶಿಯ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಬಳಕೆ ಮಾಡದಂತೆ ಕಿವಿಮಾತು ಹೇಳಿದ ಬುದ್ಧಿವಂತ

ಧಾರವಾಡ: ಶಾಲಾ, ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಲ್ಲಿ ಮಾದಕ ವಸ್ತುಗಳ ಬಳಕೆ ಮಾಡದಂತೆ ಹುಬ್ಬಳ್ಳಿ, ಧಾರವಾಡ ಮಹಾನಗರ ಪೊಲೀಸ್ ಕಮೀಷನರೇಟ್ ವತಿಯಿಂದ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಮೊನ್ನೆಯಷ್ಟೇ ಡಾ.ಶಿವರಾಜಕುಮಾರ್ ಅವರಿಂದ ಈ ಬಗ್ಗೆ ಜಾಗೃತಿ ಮೂಡಿಸಲಾಗಿತ್ತು. ಬುಧವಾರ ಕೂಡ ಧಾರವಾಡದ ಜೆಎಸ್ಎಸ್ ಕಾಲೇಜಿಗೆ ನಟ ಉಪೇಂದ್ರ ಅವರನ್ನು ಕರೆದುಕೊಂಡು ಬಂದು ಅವರಿಂದ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಯಿತು.

ನಟ ಉಪೇಂದ್ರ ಅವರು ಜೆಎಸ್ಎಸ್ ಕಾಲೇಜಿಗೆ ಬರುತ್ತಿದ್ದಾರೆ ಎಂಬ ಸುದ್ದಿ ತಿಳಿದ ತಕ್ಷಣ ಜೆಎಸ್ಎಸ್ ಕಾಲೇಜು ಆವರಣದಲ್ಲಿ ವಿದ್ಯಾರ್ಥಿ ಸಮೂಹವೇ ಜಮಾಯಿಸಿತ್ತು. ನಟ ಉಪೇಂದ್ರ ಅವರು ತಮ್ಮ"ಯುಐ" ಸಿನಿಮಾದ ಪ್ರಮೋಷನ್‌ಗಾಗಿ ಹುಬ್ಬಳ್ಳಿಗೆ ಬಂದಿದ್ದರು. ಇದೇ ಸಂದರ್ಭದಲ್ಲಿ ಮಾದಕ ವಸ್ತುಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಪೊಲೀಸರು ಮಾಡಿಸಿದ್ದಾರೆ.

ಧಾರವಾಡದ ಜೆಎಸ್ಎಸ್ ಕಾಲೇಜಿಗೆ ಬಂದ ನಟ ಉಪೇಂದ್ರ ಅವರ ಮೇಲೆ ಪುಷ್ಪಗಳನ್ನು ಹಾಕುವ ಮೂಲಕ ಬರಮಾಡಿಕೊಳ್ಳಲಾಯಿತು. ಉಪೇಂದ್ರ ಅವರು ಬರುತ್ತಿದ್ದಂತೆ ವಿದ್ಯಾರ್ಥಿಗಳು, ಶಿಳ್ಳೆ, ಕೇಕೆ ಹಾಕಿ ಸಂಭ್ರಮಿಸಿದರು. ಅಷ್ಟೇ ಅಲ್ಲದೇ ಅನೇಕರು ಅವರ ಕೈ ಕುಲುಕಿ ಸಂತಸಪಟ್ಟರು. ಈ ವೇಳೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ ನಟ ಉಪೇಂದ್ರ ಅವರು, ಈ ಭೂಮಿ ಮೇಲೆ ಅನೇಕ ಮಾದಕ ವಸ್ತುಗಳಿವೆ. ಆದರೆ, ಯಾವು ಯಾವ ರೀತಿ ಬದುಕಬೇಕು? ಜೀವನ ಕಟ್ಟಿಕೊಳ್ಳಬೇಕು ಎಂಬ ವಿಚಾರ ನಮ್ಮ ತಲೆಯಲ್ಲಿರಬೇಕು. ಯಾರು ಏನೇ ಹೇಳಿದರೂ ಎಲ್ಲವನ್ನೂ ಕೇಳಬೇಕು ಆದರೆ, ಮೊದಲು ನಮ್ಮನ್ನು ನಾವು ನಂಬಬೇಕು. ನಮಗಾಗಿ ಬದುಕಬೇಕು. ಮಾದಕ ವಸ್ತುಗಳ ಬಳಕೆ ಬೇಡ. ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು ಎಂದರು. ಇದೇ ವೇಳೆ ಅವರು ಯುಐ ಸಿನಿಮಾದ ಡೈಲಾಗ್ ಹೇಳಿದರು. ನೃತ್ಯ ಮಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು.

ಉಪೇಂದ್ರ ಅವರಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು, ಪೊಲೀಸ್ ಆಯುಕ್ತ ಎನ್.ಶಶಿಕುಮಾರ, ಡಿಸಿಪಿಗಳಾದ ಮಹಾಲಿಂಗ ನಂದಗಾವಿ, ರವೀಶ್ ಸೇರಿದಂತೆ ಅನೇಕರು ಸಾಥ್ ನೀಡಿದರು. ಧಾರವಾಡದಿಂದಲೇ ಉಪೇಂದ್ರ ಅವರ "ಯುಐ" ಸಿನಿಮಾದ ಪ್ರಮೋಷನ್ ಆರಂಭಗೊಂಡಿರುವುದಕ್ಕೆ ಉಪೇಂದ್ರ ಹರ್ಷ ವ್ಯಕ್ತಪಡಿಸಿದರು.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

04/12/2024 05:03 pm

Cinque Terre

37.77 K

Cinque Terre

0

ಸಂಬಂಧಿತ ಸುದ್ದಿ