ಬೆಂಗಳೂರು : ಬೆಳಗಿನ ಜಾವ ನಗರಕ್ಕೆ ಬರುವ ಹಾಲನ್ನ ಗುರಿಯಾಗಿಸಿ ಖದೀಮರು ಕಳ್ಳತನ ಮಾಡಿರುವ ಘಟನೆ ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಸಂದ್ರದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಕಲ್ಲಸಂದ್ರದಲ್ಲಿ ದಿಲೀಪ್ ಎಂಬುವರ ಅಂಗಡಿಯಲ್ಲಿ ಕ್ರೇಟ್ ಗಟ್ಟಲೇ ಹಾಲನ್ನ ಕದ್ದಿರುವ ಖದೀಮರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಅಂಗಡಿ ಮಾಲೀಕ ದಿಲೀಪ್ ದೂರು ನೀಡಿದರೂ ಪೊಲೀಸರು ಪ್ರಕರಣ ದಾಖಲಿಸದೆ ನಿರ್ಲಕ್ಷ್ಯ ವಹಿಸಿರುವ ಆರೋಪ ಕೇಳಿ ಬಂದಿದೆ.
ಕನಕಪುರ ರಸ್ತೆಯ ಕಲ್ಲಸಂದ್ರದಲ್ಲಿರುವ ಹಲವು ವರ್ಷಗಳಿಂದ ದಿಲೀಪ್ ಅವರು ಹಾಲಿನ ಮಾರಾಟ ಮಾಡುತ್ತಿದ್ದಾರೆ. ಬೆಳಗ್ಗಿನ ಜಾವ ಹಾಲಿನ ಬೂತ್ ಗಳಿಗೆ ಸರಬರಾಜು ಆಗುವ ಕ್ರೇಟ್ ನಲ್ಲಿ ಹಾಲನ್ನ ಅನ್ ಲೋಡ್ ಮಾಡಲಾಗುತ್ತದೆ.
ಲಾರಿಯಲ್ಲಿ ಹಾಲಿನ ಪ್ಯಾಕೆಟ್ ಗಳನ್ನ ತಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಅಂಗಡಿ ಮುಂದೆ ಇಳಿಸಲಾಗುತ್ತದೆ. ಆದರೆ ಹಾಲಿನ ಬೂತ್ ಮಾಲೀಕರು ತಡವಾಗಿ ಬಂದು ನಂತರ ವ್ಯಾಪಾರ ಆರಂಭಿಸುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ಬೆಳ್ಳಂ ಬೆಳಗ್ಗೆ ಹಾಲು ಕದಿಯೋದನ್ನೇ ರೂಢಿಸಿಕೊಂಡಿದ್ದಾರೆ.ಇದೇ ರೀತಿ ಕಳೆದ ತಿಂಗಳು 11 ರಂದು ದಿಲೀಪ್ ಅವರ ಹಾಲಿನ ಬೂತ್ ಗೆ ಬಂದು ಕೈ ಚಳಕ ತೋರಿಸಿದ್ದರು.
ದ್ವಿಚಕ್ರವಾಹನದಲ್ಲಿ ಮೂವರು ಯುವಕರು ಕ್ರೇಟ್ ಗಟ್ಟಲೆ ಹಾಲನ್ನ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ.ಇದೇ ರೀತಿ ಸುಬ್ರಹ್ಮಣ್ಯ ಪುರದ ಹಲವು ಹಾಲಿನ ಬೂತ್ ನಲ್ಲಿ ಕೈಚಳಕ ತೋರಿರುವುದು ಕಂಡುಬಂದಿದ್ದರೂ ಪೊಲೀಸರು ದೂರು ದಾಖಲಿಸಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದಿಲೀಪ್ ಆರೋಪಿಸಿದ್ದಾರೆ.
PublicNext
04/12/2024 01:23 pm