ಬೆಂಗಳೂರು: ಪೂರ್ವ ವಲಯದಲ್ಲಿ ಅನಧಿಕೃತ ಕಟ್ಟಡಗಳ ಮೇಲೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಪೂರ್ವ ವಲಯದ ಪಿ.ಯು.ಬಿ ಕಟ್ಟಡದ 10ನೇ ಮಹಡಿಯಲ್ಲಿ ನಡೆದ ಮುಖ್ಯ ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ವೇಳೆ ಮಾತನಾಡಿದ ಅವರು, ಅನಧಿಕೃತ ಕಟ್ಟಡ ನಿರ್ಮಾಣ ಮಾಡುವವರಿಗೆ ನೋಟೀಸ್ ಜಾರಿ ಮಾಡಿ ಕಾಲಮಿತಿಯೊಳಗಾಗಿ ಅನಧಿಕೃತ ಕಟ್ಟಡ ಹಾಗೂ ಕಟ್ಟಡದ ವ್ಯತಿರಿಕ್ತ ಭಾಗಗಳನ್ನು ತೆರವುಗೊಳಿಸಲು ಸೂಚನೆ ನೀಡಿದರು.
ಸಿ.ವಿ. ರಾಮನ್ ನಗರದ ಕಸ್ತೂರಿ ನಗರ ವ್ಯಾಪ್ತಿಯ ರಸ್ತೆ ಬದಿ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪಾದಚಾರಿ ಮಾರ್ಗಗಳಲ್ಲಿ ಒತ್ತುವರಿಯಾಗಿರುವುದನ್ನು ಪಾಲಿಕೆ ವತಿಯಿಂದ ತೆರವುಗೊಳಿಸಲಾಗುತ್ತಿದ್ದು, ಪಾದಚಾರಿ ಮಾರ್ಗದಲ್ಲಿ ಒತ್ತುವರಿ ತೆರವುಮಾಡಿ ಶಾಶ್ವತವಾಗಿ ಸ್ಥಾಪಿಸಿರುವ ಪೆಟ್ಟಿಗೆಗಳು ಇಲ್ಲದಂತೆ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ನ್ಯೂ ತಿಪ್ಪಸಂದ್ರ ವೆಂಕಟೇಶ್ವರ ಕಾಲೋನಿ ರಸ್ತೆಯಲ್ಲಿ ಒಳಚರಂಡಿಯ ಕಾಮಗಾರಿಗಾಗಿ ರಸ್ತೆ ಮಧ್ಯದ ಭಾಗ ಅಗೆದಿದ್ದು, ಕಾಮಗಾರಿ ಪೂರ್ಣಗೊಂಡು 6 ತಿಂಗಳಾದರೂ ರಸ್ತೆ ದುರಸ್ತಿ ಮಾಡಿರುವುದಿಲ್ಲ ಎಂದು ಕೇಳಿದ ಪ್ರಶ್ನೆಗೆ, ಜಲಮಂಡಳಿ ಅಧಿಕಾರಿಗಳ ಜೊತೆ ಮಾತನಾಡಿ ಕೂಡಲೆ ರಸ್ತೆ ಅಗೆದಿರುವ ಭಾಗವನ್ನು ಜಲಮಂಡಳಿಯಿಂದ ಮುಚ್ಚಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾಕ್ಸ್ ಟೌನ್ ನಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಿದ್ದು, ಅದನ್ನು ಇನ್ನೂ ತೆರೆದಿರುವುದಿಲ್ಲ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕಾಕ್ಸ್ ಟೌನ್ ಮಾರುಕಟ್ಟೆ ತೆರವು ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದರು.
ಈ ವೇಳೆ ವಲಯ ಆಯುಕ್ತರಾದ ಪ್ರೀತಿ ಗೆಹ್ಲೋಟ್, ವಲಯ ಜಂಟಿ ಆಯುಕ್ತರಾದ ಸರೋಜಾ, ಮುಖ್ಯ ಅಭಿಯಂತರರಾದ ಸುಗುಣಾ, ಉಪ ಆಯುಕ್ತರಾದ ರಾಜು, ಕಾರ್ಯಪಾಲಕ ಅಭಿಯಂತರರು, ಆರೋಗ್ಯಾಧಿಕಾರಿ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
PublicNext
04/12/2024 09:26 pm