ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ನ ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸಲು ಇಚ್ಛಿಸುವ ಅರ್ಹರಿಗೆ ಅವರ ರಾಂಕ್ ಆಧಾರದ ಮೇಲೆ ಕೆಇಎ ಕಚೇರಿಯಲ್ಲಿ ಮೂಲ ದಾಖಲೆ ಸಲ್ಲಿಸಲು ಡಿ.6ರಿಂದ 17ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿ ಚಾಯ್ಸ್-2 ಆಯ್ಕೆ ಮಾಡಿ ಶುಲ್ಕ ಪಾವತಿಸಿರುವವರು ಹಾಗೂ ಯಾವುದೇ ಸೀಟು ಹಂಚಿಕೆಯಾಗದೇ ಇರುವವರು ಮೂಲ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಚಾಯ್ಸ್ - 2 ಮತ್ತು 3 ಅನ್ನು ಆಯ್ಕೆ ಮಾಡಿಕೊಂಡವರು ಡಿ.6, 7 ಮತ್ತು 9 ರಂದು ದಾಖಲೆ ಸಲ್ಲಿಸಬೇಕು. ಸೀಟು ಹಂಚಿಕೆಯಾಗದವರು ಡಿ.10ರಿಂದ 17ರವರಗೆ ದಾಖಲೆ ಸಲ್ಲಿಸಬೇಕು. ನಿಗದಿತ ದಿನಾಂಕಗಳಂದು ಮೂಲ ದಾಖಲೆ ಸಲ್ಲಿಸದಿದ್ದಲ್ಲಿ 2ನೇ ಸುತ್ತಿನ ಸೀಟು ಹಂಚಿಕೆಗೆ ಅಂತಹವರನ್ನು ಪರಿಗಣಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಎಂಬಿಎ, ಎಂಸಿಎ, ಎಂ.ಟೆಕ್, ಎಂ.ಆರ್ಕಿಟೆಕ್ಚರ್ ಕೋರ್ಸ್ ಗಳ ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದವರಿಗೆ ಶುಲ್ಕ ಪಾವತಿಸಲು ಡಿ.6ರವರೆಗೆ ದಿನಾಂಕ ವಿಸ್ತರಿಸಲಾಗಿದೆ ಎಂದು ಪ್ರಸನ್ನ ತಿಳಿಸಿದ್ದಾರೆ.
ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡು ಕಾಲೇಜಿಗೆ ವರದಿ ಮಾಡಿಕೊಳ್ಳಲು ಡಿ.7 ಕೊನೆ ದಿನ. ಇದರ ನಂತರ ಯಾವುದೇ ಕಾರಣಕ್ಕೂ ವಿಸ್ತರಣೆ ಮಾಡುವುದಿಲ್ಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪಿಜಿ ಆಯುಷ್ ಕೋರ್ಸ್ ಗಳ ಮಾಪ್ ಅಪ್ ಸುತ್ತಿನ ಸೀಟು ಹಂಚಿಕೆಗೆ ಡಿ.5ರ ಬೆಳಿಗ್ಗೆ 9ರವರೆಗೆ ಇಚ್ಛೆಗಳನ್ನು (Options) ದಾಖಲಿಸಲು ಮತ್ತೊಮ್ಮೆ ಪೋರ್ಟಲ್ ತೆರೆಯಲಾಗಿದೆ. ಅದೇ ದಿನ ಸಂಜೆ 4ರ ನಂತರ ಈ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಪ್ರಸನ್ನ ವಿವರಿಸಿದ್ದಾರೆ.
PublicNext
04/12/2024 09:51 pm