ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಮಟಾ-ಶಿರಸಿ ರಸ್ತೆ ಬಂದ್ : ಅವ್ಯವಸ್ಥೆಯ ಆಗರವಾದ ಪರ್ಯಾಯ ರಸ್ತೆ!

ಕಾರವಾರ: ರಸ್ತೆ ಕಾಮಗಾರಿ ಸಲುವಾಗಿ ರಾಷ್ಟ್ರೀಯ ಹೆದ್ದಾರಿ 766- ಕುಮಟಾ - ಶಿರಸಿ ರಸ್ತೆ ಸಂಚಾರ ಬಂದ್ ಮಾಡಿ ವಾಹನಗಳಿಗೆ ಪರ್ಯಾಯ ಮಾರ್ಗವಾಗಿ ಸೂಚಿಸಿರುವ ಕುಮಟಾ- ಸಿದ್ದಾಪುರ (ಬಡಾಳ ರಸ್ತೆ) ರಾಜ್ಯ ಹೆದ್ದಾರಿ ಸೂಚಿಸಲಾಗಿದೆ. ಆದರೆ ಈ ಹೆದ್ದಾರಿ ಗುಂಡಿಗಳಿಂದ ಹದಗೆಟ್ಟಿದ್ದು ಹೋಗಿದೆ. ಗಿಡಗಂಟಿಗಳು ರಸ್ತೆಗೆ ಆವರಿಸಿ ಅಪಾಯಕ್ಕೆ ಆಹ್ವಾನಿಸುವ ಅವ್ಯವಸ್ಥೆಯಾಗಿ ಮಾರ್ಪಟ್ಟಿದೆ.

ಹೌದು, ಕುಮಟಾ- ಶಿರಸಿ ರಸ್ತೆಯನ್ನು ಸುಮಾರು ಎರಡು ತಿಂಗಳು ಬಂದ್ ಮಾಡುವುದಾಗಿ ಜಿಲ್ಲಾಡಳಿತ ಆದೇಶ ಮಾಡಿದೆ. ಆದರೆ, ಆ ರಸ್ತೆಗೆ ಪರ್ಯಾಯವಾಗಿ ಸೂಚಿಸಿರುವ ಯಾವ ರಸ್ತೆಯೂ ಸುಸ್ಥಿತಿಯಲ್ಲಿ ಇಲ್ಲ. ಅವು ಸಹ ಗುಂಡಿ ಬಿದ್ದು ಹಾಳಾಗಿವೆ. ಪರ್ಯಾಯ ಮಾರ್ಗಗಳನ್ನು ಸರಿಯಾಗಿ ಸಜ್ಜುಗೊಳಿಸದೇ ವಾಹನಗಳ ಸಂಚಾರ ಮಾರ್ಗ ಬದಲಿಸಲು ಮುಂದಾಗಿರುವುದು ವಾಹನ ಸವಾರರಿಗೆ ಮತ್ತು ಸ್ಥಳೀಯರಿಗೆ ಇಕ್ಕಟ್ಟಿನ ಸ್ಥಿತಿ ತಂದಿರಿಸಿದೆ. 'ದಮ್ಮಯ್ಯ... ರಸ್ತೆ ದುರಸ್ತಿ ಮಾಡಿ' ಎಂದು ಜನ ಗೋಗರೆಯುತ್ತಿದ್ದಾರೆ.

ಅಂಕೋಲಾ - ಯಲ್ಲಾಪುರ ಮತ್ತು ಕುಮಟಾ - ಶಿರಸಿ ರಾಷ್ಟ್ರೀಯ ಹೆದ್ದಾರಿಗಳು ಉತ್ತರ ಕರ್ನಾಟಕ ಮತ್ತು ಕರಾವಳಿಯ ವ್ಯಾಪಾರ ವಹಿವಾಟು ಬೆಸೆಯುವ ಅತ್ಯಂತ ಪ್ರಮುಖ ದಾರಿ. ಈ ಹೆದ್ದಾರಿಗಳಲ್ಲಿ ನಿತ್ಯ ಮಿತಿ ಮೀರಿ ವಾಹನಗಳು ಸಂಚಾರ ಮಾಡುತ್ತವೆ. ಶಿರಸಿ - ಕುಮಟಾ ಹೆದ್ದಾರಿಯನ್ನು ಗುತ್ತಿಗೆ ಪಡೆದಿರುವ ಆರ್‌ಎನ್‌ಎಸ್ ಕಂಪೆನಿಯು ದೇವಿಮನೆ ಘಟ್ಟ ಪ್ರದೇಶದಲ್ಲಿ ಸೇತುವೆ ನಿರ್ಮಾಣ ಬಾಕಿ ಇರುವುದರಿಂದ ಕಾಮಗಾರಿಗೆ ಎರಡು ತಿಂಗಳು ಕಾಲಾವಕಾಶ ಕೋರಿ ವಾಹನ ಸಂಚಾರ ಬಂದ್ ಮಾಡುವಂತೆ ಕೋರಿದೆ.

ಅದರಂತೆ ಡಿಸೆಂಬರ್ 2ರಿಂದ 2025ರ ಫೆಬ್ರವರಿ 25ರವರಗೆ ಕುಮಟಾ - ಶಿರಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್ ಮಾಡಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಆದೇಶ ಮಾಡಿದ್ದಾರೆ.

ಒಟ್ಟಿನಲ್ಲಿ ಪರ್ಯಾಯ ರಸ್ತೆಗಳ ದುರಸ್ತಿ ಮಾಡದೇ ಇದ್ದರೆ ಮುಂದೊಂದು ದಿನ ಹೆದ್ದಾರಿ ಸಂಚಾರವೇ ಬಂದ್ ಆಗುವ ಆತಂಕ ಇದೆ. ಹಾಗಾಗಿ ಕುಮಟಾ - ಸಿದ್ದಾಪುರ ರಸ್ತೆ ದುರಸ್ತಿ ಕೆಲಸ ಮಾಡುವುದು ಯಾವಾಗ ಎನ್ನುವುದು ಸ್ಥಳೀಯರ ಪ್ರಶ್ನೆಯಾಗಿದೆ.

Edited By : Manjunath H D
PublicNext

PublicNext

03/12/2024 10:17 pm

Cinque Terre

17.69 K

Cinque Terre

0

ಸಂಬಂಧಿತ ಸುದ್ದಿ