ಚಿತ್ರದುರ್ಗ: ಡಿಸೆಂಬರ್ 07 ಮತ್ತು 08 ರಂದು ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ವತಿಯಿಂದ ಪಂಚಾಯತಿ ಅಭಿವೃದ್ಧಿ ಅಧಿಕಾರಿ(ಪಿಡಿಓ) ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳ ತಪಾಸಣೆಗೆ ಅನುಕೂಲವಾಗುವಂತೆ ಹೆಚ್ಚುವರಿ ಪೊಲೀಸರನ್ನು ನೇಮಿಸಲು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.
ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಮ.3 ಗಂಟೆಗೆ ಈ ಕುರಿತು ಜರುಗಿದ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನೇಮಕಾತಿ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳ ಭವಿಷ್ಯ ಅಡಗಿದೆ ಯಾವುದೇ ಗೊಂದಲ ಹಾಗೂ ಅಕ್ರಮಗಳಿಗೆ ಎಡೆ ಮಾಡಿಕೊಡದಂತೆ ಪರೀಕ್ಷಾ ಕಾರ್ಯ ನಡೆಸಬೇಕು. ಪರೀಕ್ಷಾ ಸಂಬಂಧ ಕೆಪಿಎಸ್‌ಸಿ ನೀಡಿರುವ ಮಾರ್ಗಸೂಚಿಗಳನ್ನು ತಪ್ಪದೇ ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಾಕೀತು ಮಾಡಿದರು.
ಮೊಬೈಲ್, ಬ್ಲೂಟೂತ್ ಮತ್ತು ಆಧುನಿಕ ಸಂವಹನದ ಉಪಕರಣ ಬಳಸಿ ಪರೀಕ್ಷಾ ಅಕ್ರಮ ಮಾಡುವುದನ್ನು ತಡೆಯಲು ಅಭ್ಯರ್ಥಿಗಳನ್ನು ಸಂಪೂರ್ಣವಾಗಿ ತಪಾಸಣೆ ನಡೆಸಬೇಕು. ಕೆ.ಪಿ.ಎಸ್.ಸಿ ವತಿಯಿಂದ ತಪಾಸಣೆಗೆ ವ್ಯಕ್ತಿಗಳನ್ನು ನಿಯೋಜನೆ ಮಾಡುವುದಾಗಿ ತಿಳಿಸಿದ್ದಾರೆ. ಆದಾಗ್ಯೂ ಎಲ್ಲಾ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ತಪಾಸಣೆಗಾಗಿ ಪ್ರತ್ಯೇಕ ತಂಡ ರಚಿಸಬೇಕು. ಪ್ರತಿ ಪರೀಕ್ಷಾ ಕೇಂದ್ರಗಳಿಗೂ ಮಹಿಳಾ ಅಭ್ಯರ್ಥಿಗಳ ತಪಾಸಣೆಗೆ ಅನುಕೂಲವಾಗುವಂತೆ ಹೆಚ್ಚುವರಿ ಮಹಿಳಾ ಪೊಲೀಸರನ್ನು ತಪ್ಪದೇ ನೇಮಿಸಬೇಕು. ಅಕ್ರಮ ತಡೆಯಲು ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್ ಹಾಗೂ ಪರೀಕ್ಷಾ ನಡೆಯುವ ಕೊಠಡಿಗಳಲ್ಲಿ ಸಿ.ಸಿ.ಟಿ.ವಿ ಈಗಾಗಲೇ ಅಳವಡಿಸಲು ಸೂಚನೆ ನೀಡಲಾಗಿದೆ. ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ಜಾಮರ್, ಸಿ.ಸಿ.ಟಿ.ವಿ ಕ್ಯಾಮೆರಾಗಳು ಸುಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನಿರ್ದೇಶಿಸಿದರು. ಈ ವೇಳೆ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.
PublicNext
03/12/2024 08:06 pm