ಚಿತ್ರದುರ್ಗ: ದೇಶದಲ್ಲಿ ಹೆಚ್.ಐ.ವಿ. ಸೊಂಕಿಗೆ ತುತ್ತಾಗುತ್ತಿರುವವರ ಪೈಕಿ ಹೆಚ್ಚಿನವರು ಯುವಕರಾಗಿರುವುದು ಆತಂತಕಾರಿ ವಿಷಯವಾಗಿದೆ. ಯುವ ಜನತೆ ಹೆಚ್.ಐ.ವಿ ಕುರಿತು ಜಾಗರೂಕರಾಗಿರಬೇಕು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಎಸ್.ಪಿ. ರವೀಂದ್ರ ಕಿವಿ ಮಾತು ಹೇಳಿದರು.
ನಗರದ ಮಹಾರಾಜ ಮದಕರಿ ನಾಯಕ ಪ್ರಥಮ ದರ್ಜೆ ಕಾಲೇಜಿನ ಶ್ರೀ ಗುರು ವಾಲ್ಮೀಕಿ ಮಹರ್ಷಿ ಸಭಾಂಗಣದಲ್ಲಿ, ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆ ಘಟಕ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಮಹಾರಾಜ ಮದಕರಿ ನಾಯಕ ಪ್ರಥಮ ದರ್ಜೆ ಕಾಲೇಜು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ “ವಿಶ್ವ ಏಡ್ಸ್ ದಿನ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತಾಡಿದರು.
1988 ರಿಂದ ಪ್ರತಿ ವರ್ಷ ಡಿ.1ರಂದು ವಿಶ್ವ ಏಡ್ಸ್ ದಿನ ಆಚರಿಸಲಾಗುತ್ತದೆ. ಸರ್ಕಾರದಿಂದ ಈ ಸೋಂಕನ್ನು ಸಂಪೂರ್ಣವಾಗಿ ತಡೆಗಟ್ಟಲು ಹಲವಾರು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೆಚ್ಐವಿ ಸೋಂಕು 4 ಹಂತಗಳಲ್ಲಿ ಹರಡುತ್ತದೆ. ಅಸುರಕ್ಷಿತ ಲೈಂಗಿಕ ಕ್ರಿಯೆ, ತಾಯಿಯಿಂದ ಮಗುವಿಗೆ, ಸೋಂಕಿತರ ರಕ್ತದಿಂದ ಹಾಗೂ ಐ.ಡಿ.ಯೂಗಳಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ಯುವಕರು ಮಾದಕ ವ್ಯಸನ ತುತ್ತಾಗುವುದರ ಜೊತೆಗೆ, ಹೆಚ್.ಐ.ವಿ ಸೊಂಕಿಗೆ ಬಲಿಯಾಗುತ್ತಿದ್ದಾರೆ. ಸೋಂಕಿಗೆ ಒಳಗಾದವರು ಯಾವುದೇ ಮುಜುಗರಕ್ಕೆ ಒಳಗಾಗದೆ ಭಯ ಭೀತಿ ಇಲ್ಲದೇ ಪರೀಕ್ಷಿಸಿಕೊಂಡು ಹೆಚ್.ಐ.ವಿ ಮುಕ್ತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಡಾ.ಎಸ್.ಪಿ.ರವೀಂದ್ರ ಹೇಳಿದರು.
Kshetra Samachara
03/12/2024 05:51 pm