ಬೆಳಗಾವಿ: ಕೃಷಿ ಮಹಿಳಾ ಕಾರ್ಮಿಕರು, ಕೂಲಿ ಕೆಲಸವನ್ನೇ ನಂಬಿ ಜೀವನ ಮಾಡ್ತಿದ್ದವರು ಅಂತಹ ಮುಗ್ಧ ಮಹಿಳೆಯರನ್ನೇ ಟಾರ್ಗೆಟ್ ಮಾಡಿದ ವಂಚಕ ಮಹಿಳೆಯೊಬ್ಬಳು ಸಾವಿರಾರು ಜನರಿಗೆ ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿ ಈಗ ಪೊಲೀಸರ ಅಥಿತಿ ಆಗಿದ್ದಾಳೆ.
ಈ ಫೋಟೋದಲ್ಲಿ ಕಾಣ್ತಿರುವ ಮಹಿಳೆ ಹೆಸರು ಯಲ್ಲವ್ವ ಬನ್ನಿಬಾಗಿ ಅಂತ. ಬೆಳಗಾವಿ ತಾಲೂಕಿನ ಹಾಲಾಭಾವಿ ಗ್ರಾಮದ ನಿವಾಸಿ. ಕಳೆದ ಮೂರು ವರ್ಷಗಳಿಂದ ಹಳ್ಳಿ ಹಳ್ಳಿಗಳಿಗೆ ತೆರಳಿ ಸಾಲ ಕೊಡಿಸುವುದಾಗಿ ಮುಗ್ಧ ಬಡ ಮಹಿಳೆಯರಿಗೆ ಪ್ರಚೋದನೆ ಮಾಡಿದ್ದಾಳೆ. ಅಷ್ಟೇ ಅಲ್ಲದೇ ಬೆಳಗಾವಿ ಜಿಲ್ಲೆಯ ಬಹುತೇಕ ತಾಲೂಕಿನಲ್ಲಿ ಸಾವಿರಾರು ಸಂಘಟನೆಗಳನ್ನು ಕಟ್ಟಿದ್ದಾಳೆ. ಆರ್ಥಿಕ ನೆರವು ಸಿಗುತ್ತೆ ಅಂತಾ ನಂಬಿದ ಮಹಿಳೆಯರು ಯಲ್ಲವ್ವನ ಮೋಸದ ಜಾಲಕ್ಕೆ ಬಲಿಯಾಗಿದ್ದಾರೆ. ಪ್ರತಿ ಸಂಘಕ್ಕೂ ಸಂಘದ ಸದಸ್ಯರಿಗೂ ಸ್ಥಳೀಯ ಫೈನಾನ್ಸ್, ಸೊಸೈಟಿ, ಹಣಕಾಸು ನೀಡುವ ಸಂಘದಲ್ಲಿ ತಲಾ 1 ಲಕ್ಷ, ಐವತ್ತು ಸಾವಿರ ಹೀಗೆ ಸಾಲ ತೆಗೆಸಿದ್ದಾಳೆ. ಅದರಲ್ಲಿ ಅರ್ಧ ಹಣವನ್ನು ಯಲ್ಲವ್ವ ಪಡೆದರೆ ಇನ್ನುಳಿದ ಅರ್ಧ ಆಕೆ ಪಡೆದು ಆಕೆಯ ಸಾಲದ ಹಣ ಎಲ್ಲವನ್ನೂ ನಾನೆ ತುಂಬುತ್ತೇನೆ ಅಂತಾ ಹೇಳಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ್ದಾಳೆ.
ಇನ್ನೂ ಹೀಗೆ ತೆಗೆದುಕೊಂಡ ಸಾಲದ ಪಾವತಿಗೆ ಫೈನಾನ್ಸ್ ಮತ್ತು ಸೊಸೈಟಿ ಸಿಬ್ಬಂದಿ ಮನೆಗೆ ಬರ್ತಿದ್ದಂತೆ ಸಾಲ ಪಡೆದವರು ಶಾಕ್ ಆಗಿದ್ದಾರೆ. ಯಲ್ಲವ್ವ ನಮಗೆ ಆರ್ಥಿಕ ನೆರವು ನೀಡಲು ಬಂದಿಲ್ಲ ಮೋಸ ಮಾಡಲು ಬಂದವಳು ಅಂತಾ ಈಗ ಗೊತ್ತಾಗಿದೆ. ಈ ಕಾರಣಕ್ಕೆ ಹಾಲಭಾವಿ ಗ್ರಾಮದಲ್ಲಿರುವ ಮನೆಗೆ ಹೋಗಿರುವ ಜನರು ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೆಸರನ್ನು ಹೇಳಿಕೊಂಡು ವಂಚನೆ ಮಾಡುತ್ತಿದ್ದ ಸಂಗತಿ ಬೆಳಕಿಗೆ ಬಂದಿದ್ದು ಇಂದು ಕೂಡ ಜಿಲ್ಲೆಯ ವಿವಿಧ ಭಾಗಗಳಿಂದ ನೂರಾರು ಮಹಿಳೆಯರು ಯಲ್ಲವ್ವ ಮನೆಗೆ ಆಗಮಿಸಿ ಘೇರಾವ್ ಹಾಕಿದ್ದಾರೆ. ಹಣ ವಾಪಸ್ ಕೊಡುವಂತೆ ಯಲ್ಲವ್ವಗೆ ಮನವಿ ಮಾಡಿದ್ದಾರೆ. ಇನ್ನೂ ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಗ್ನ ಆಗುತ್ತಿದ್ದಂತೆ ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್ ಭೇಟಿ ನೀಡಿ ಹಣ ಕಳೆದುಕೊಂಡ ಮಹಿಳೆಯರ ಮನವೊಲಿಕೆಗೆ ಹರಸಾಹಸಪಟ್ಟರು. ಬಳಿಕ ವಂಚಕಿಯನ್ನ ಪೊಲೀಸರು ವಶಕ್ಕೆ ಪಡೆದರು. ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಟ್ಟಾರೆ ಒಂದೆಡೆ ಅಮಾಯಕರಿಂದ ಕೋಟ್ಯಾಂತರ ರೂಪಾಯಿ ಹಣ ಸಂಗ್ರಹಿಸಿ ಯಲ್ಲವ್ವ ಐಷಾರಾಮಿ ಜೀವನ ನಡೆಸುತ್ತಿದ್ದರೆ ಸಾಲದ ಸುಳಿಯಲ್ಲಿ ಸಿಲುಕಿದ ಜನರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಇಂತಹ ವಂಚಕರ ಬಗ್ಗೆ ಎಚ್ಚರ ವಹಿಸದಿದ್ರೆ ನಾವು ಕೂಡ ಮಕ್ಮಲ್ ಟೋಪಿ ಹಾಕಿಕೊಳ್ಳಬೇಕಾದೀತು ಎಚ್ಚರ.
PublicNext
03/12/2024 05:00 pm