ಕುಂದಗೋಳ: ಅಕ್ಟೋಬರ್ 9ರಂದು ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ರಾತ್ರೋರಾತ್ರಿ ಸ್ಥಾಪನೆ ಮಾಡಿದ ಸಂಗೊಳ್ಳಿ ರಾಯಣ್ಣನ ಮೂರ್ತಿಯ ಖಡ್ಗಕ್ಕೆ ಇಂದು ಹಾನಿ ಮಾಡಿದ ಕಾರಣ ಕೆಲಕಾಲ ಗುಡೇನಕಟ್ಟಿಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಹೌದು! ಗುಡೇನಕಟ್ಟಿ ಗ್ರಾಮದಲ್ಲಿ ಅಕ್ಟೋಬರ್ 9ರ ರಾತ್ರಿ ಯಾರೋ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು.
ಅಂದು ಸ್ಥಳಕ್ಕೆ ಬಂದ ತಹಶೀಲ್ದಾರ್ ಮಹಾಶಯರು, ಮೂರ್ತಿ ಸ್ಥಾಪನೆ ಮತ್ತು ರಕ್ಷಣೆ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರ ತಾಳದೆ ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚನೆ ನೀಡಿ ಇಂದಿಗೆ ಒಂದೂವರೆ ತಿಂಗಳು ಕಳೆದರೂ ಯಾವುದೇ ಸ್ಪಷ್ಟ ಉತ್ತರ ಸಿಕ್ಕಿಲ್ಲಾ.
ಇದೀಗ ರಾಯಣ್ಣನ ಖಡ್ಗ ಹಾನಿಯಾದ ಹಿನ್ನೆಲೆಯಲ್ಲಿ ಮೂರ್ತಿ ಸುತ್ತಲೂ ಗ್ರಾಮದ ಜನತೆ ಸೇರಿದಾಗ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದರು. ಸಿಸಿ ಕ್ಯಾಮೆರಾ ದೃಶ್ಯದಲ್ಲಿ ಮಂಗವೊಂದು ಖಡ್ಗಕ್ಕೆ ಸಿಕ್ಕಿಸಿದ್ದ ನಿಂಬೆ ಹಣ್ಣು ಕೀಳಲು ಹೋಗಿ ಖಡ್ಗ ಹಾನಿಯಾಗಿದ್ದು ಗೊತ್ತಾಗಿ ಆಡಳಿತ ವ್ಯವಸ್ಥೆ ಹಾಗೂ ಜನರು ನಿರಾಳರಾದರು.
ಸದ್ಯ ಸಂಗೊಳ್ಳಿ ರಾಯಣ್ಣನ ಖಡ್ಗಕ್ಕೆ ಹಾನಿಯಾದ ವಿಷಯ ಕಪಿರಾಯನಿಂದ ಎಂಬುದು ಸಿಸಿ ಕ್ಯಾಮೆರಾ ವ್ಯವಸ್ಥೆಯಿಂದಾಗಿ ಬಯಲಾಗಿದೆ. ಆದರೆ, ರಕ್ಷಣೆ ಇಲ್ಲದೇ ಇರುವ ಮೂರ್ತಿ ಬಗ್ಗೆ ತಾಲೂಕು ಹಾಗೂ ಜಿಲ್ಲಾಡಳಿತ ಏನು ಕ್ರಮ ಕೈಗೊಳ್ಳಲಿದೆ ಎಂಬುದು ಮಾತ್ರ ಪ್ರಶ್ನೆಯಾಗಿಯೇ ಉಳಿದಿದೆ.
-ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಕುಂದಗೋಳ
Kshetra Samachara
01/12/2024 10:56 am