ಶಿವಮೊಗ್ಗ : ಈ ಆಸ್ಪತ್ರೆ ಆವರಣದಲ್ಲಿ ರೋಗಿಗಳು ಅದರಲ್ಲೂ ಗರ್ಭಿಣಿಯರು, ಬಾಣಂತಿಯರು ಕೂರಲೂ, ನಿಲ್ಲಲೂ ಕೂಡ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಯುಜಿಡಿಯಿಂದ ಕಸ ಹೊರಬಂದು ದುರ್ನಾತದಿಂದಾಗಿ, ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿನ ಹೆರಿಗೆ ವಾರ್ಡಿಗೆ ಶೌಚಾಲಯ ಇಲ್ಲವಾಗಿದ್ದು, ಇರುವ ಶೌಚದ ಯುಜಿಡಿ ತುಂಬಿ ಮಲಿನ ನೀರು ಹೊರಗೆ ಹರಿಯುತ್ತಿದೆ. ಇದರಿಂದಾಗಿ ಆಸ್ಪತ್ರೆ ಆವರಣದಲ್ಲಿ ದುರ್ನಾತ ಬೀರಿ ಸಮಸ್ಯೆಯುಂಟಾಗಿದೆ.
ಯುಜಿಡಿ ಸಮಸ್ಯೆಯಿಂದಾಗಿ ಆಸ್ಪತ್ರೆ ಆವರಣದಲ್ಲಿ ಗಬ್ಬುನಾಥ ಬೀರುವಂತಾಗಿದ್ದು, ಆಸ್ಪತ್ರೆಗೆ ಹೆರಿಗೆಗಾಗಿ ಬಂದ ಗರ್ಭಿಣಿಯರು ಹಿಡಿಶಾಪ ಹಾಕುವಂತಾಗಿದೆ. ರೋಗಿಗಳ ಕಡೆಯವರು, ಈ ದುರ್ವಾಸನೆ ತಡೆಯೋಕಾಗದೇ ಬೇರೆ ಹಾಸ್ಪಿಟಲ್ ಗೆ ಮುಖ ಮಾಡುವಂತಾಗಿದೆ. ಶೌಚಾಲಯದ UGD ತುಂಬಿ 3 - 4 ತಿಂಗಳು ಕಳೆದಿದ್ದರೂ ಕೂಡ ಇದನ್ನು ಸರಿಪಡಿಸುವ ಗೋಜಿಗೆ ಹೋಗದ ಆಡಳಿತ ವೈದ್ಯಾಧಿಕಾರಿ, ಈಗ ಶಾಸಕರಿಗೆ ಹೇಳಿ ಬೇರೆ ಅನುದಾನ ಬಳಸಿ ಸರಿಪಡಿಸುತ್ತಿದ್ದೇವೆಂಬ ಸಬೂಬು ಹೇಳುತ್ತಿದ್ದಾರೆ.
ಈ ಸಮಸ್ಯೆ ಬಗ್ಗೆ ARS ಕಮಿಟಿ ಸದಸ್ಯರು ಕೂಡ ಗಮನ ನೀಡದಿರುವುದು ಆಶ್ಚರ್ಯವಾಗಿದ್ದು, ಯುಜಿಡಿ ಸಮಸ್ಯೆ ಸರಿಪಡಿಸಲು ಕೇವಲ 20 ರಿಂದ 30 ಸಾವಿರ ರೂ. ಅಗತ್ಯವಿದೆ. ಆದರೆ ಅನುದಾನದ ಕೊರತೆ ಇದೆ ಎಂದು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಹೇಳುತ್ತಿದ್ದಾರೆ. ಈ ಅವ್ಯವಸ್ಥೆಯಿಂದಾಗಿ ಬಾಣಂತಿ ಮತ್ತು ಮಗುವಿನ ಮೇಲೆ ದುಷ್ಪರಿಣಾಮ ಬೀರುವಂತಾಗಿದ್ದು, ಶಾಸಕ ಬೇಳೂರು ಗೋಪಾಲಕೃಷ್ಣ ಕೂಡಲೇ ಇತ್ತ ಗಮನ ಹರಿಸಬೇಕಿದೆ.
PublicNext
28/11/2024 04:09 pm