ಶಿವಮೊಗ್ಗ : ಮಹಾನಗರ ಪಾಲಿಕೆಗೆ ಇಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಭೈರತಿ ಸುರೇಶ್ ದಿಢೀರ್ ಭೇಟಿ ನೀಡಿ ಕರ್ತವ್ಯಲೋಪ ಎಸಗಿದ ಅಧಿಕಾರಿಯೋಬ್ಬರನ್ನು ಅಮಾನತುಗೊಳಿಸುವಂತೆ ಆದೇಶಿಸಿದ್ದಾರೆ. ದಿಢೀರ್ ಭೇಟಿ ವೇಳೆ ಪಾಲಿಕೆ ಅಧಿಕಾರಿಗಳಿಗೆ ಚಳಿ ಬಿಡಿಸಿದ್ದಾರೆ.
ನೇರವಾಗಿ ಕಂದಾಯ ವಿಭಾಗಕ್ಕೆ ಭೇಟಿ ನೀಡಿದ ಅವರು ಸ್ಥಳದಲ್ಲಿದ್ದ ಹಾಗೂ ದೂರು ನೀಡಿದ್ದ ಸಾರ್ವಜನಿಕರಿಗೆ ಫೋನ್ ಮಾಡಿ ಮಾಹಿತಿ ಪಡೆದರು. ಅರ್ಜಿ ಯಾವಾಗ ನೀಡಿದ್ದೀರಿ, ಎಷ್ಟು ತಿಂಗಳಿನಿಂದ ಓಡಾಡುತ್ತಿದ್ದೀರಿ, ಸಂಬಂಧಿಸಿದ ಅಧಿಕಾರಿಗಳು ಸ್ಪಂಧಿಸಿದ್ದಾರೆಯೆ ? ಎಂಬ ಬಗ್ಗೆ ಮಾಹಿತಿ ಪಡೆದು ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರು ನಾ ಮುಂದು ತಾ ಮುಂದು ಎಂದು ಜಮಾಯಿಸಿ, ಸಚಿವರಿಗೆ ಪಾಲಿಕೆಯ ಮೇಲೆ ದೂರಿನ ಸುರಿಮಳೆಗೈಯ್ದರು.
ಚರಂಡಿ ಸ್ವಚ್ಛತೆ ಇಲ್ಲ ಎಂದು ದೂರು ನೀಡಿ 25 ದಿನಗಳಾಗಿತ್ತು. ಆದರೆ ಪಾಲಿಕೆ ವತಿಯಿಂದ ಯಾರು ಸ್ಥಳಕ್ಕೆ ಬಂದಿರಲಿಲ್ಲ. ಇದನ್ನು ತಿಳಿದ ಸಚಿವರು ತಕ್ಷಣ ಸ್ಥಳೀಯ ಆರೋಗ್ಯಾಧಿಕಾರಿ ವೇಣುಗೋಪಾಲ್ ಅವರನ್ನು ಸ್ಥಳದಲ್ಲೇ ಈ ಕೂಡಲೇ ಸಸ್ಪೆಂಡ್ ಮಾಡುವಂತೆ ಆಯುಕ್ತರಿಗೆ ಸೂಚಿಸಿದರು. ಅಲ್ಲದೇ, ಅಲ್ಲಿ ನೆರೆದ ನಾಗರಿಕರು ಪಾಲಿಕೆಯಲ್ಲಿ ಖಾತೆ ಮಾಡಿಕೊಡಲು ಮತ್ತು ಈ ಸ್ವತ್ತು ಮಾಡಲು ಆಗುತ್ತಿರುವ ವಿಳಂಬದ ಬಗ್ಗೆ ಗಮನಸೆಳೆದರು. ಪಾಲಿಕೆ ವ್ಯಾಪ್ತಿಯಲ್ಲಿ ಅನೇಕ ಕಡೆ ಸ್ವಚ್ಛತೆಯಿಲ್ಲ. ಪಾಲಿಕೆ ಆವರಣವೇ ಗಬ್ಬೆದ್ದು ಹೋಗಿದೆ. ಅಧಿಕಾರಿಗಳು ಯಾರು ಕೆಲಸ ಮಾಡುತ್ತಿಲ್ಲ ಎಂದು ಆಯುಕ್ತರನ್ನು ಸೇರಿದಂತೆ ತರಾಟೆಗೆ ತೆಗೆದುಕೊಂಡರು. ಎಲ್ಲದರ ಮಾಹಿತಿ ಪಡೆದ ಸಚಿವರು ನಾನು ಇನ್ನೊಮ್ಮೆ ಬರುತ್ತೇನೆ. ಅಷ್ಟರೊಳಗೆ ವ್ಯವಸ್ಥೆ ಸರಿಪಡಿಸಬೇಕು. ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸದೇ ಕರ್ತವ್ಯ ಲೋಪ ಎಸಗುವ ಸಿಬ್ಬಂದಿಯ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
PublicNext
30/11/2024 09:13 pm