ಧಾರವಾಡ: ರಾಜ್ಯದ ರೈತರು ತೀವ್ರ ಸಂಕಷ್ಟದಲ್ಲಿದ್ದು, ಅವರ ಸಾಲವನ್ನು ರಾಜ್ಯ ಸರ್ಕಾರ ಮನ್ನಾ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರವಿರಾಜ್ ಕಂಬಳಿ ಎನ್ನುವವರು ಕಾರ್ಮಿಕ ಸಚಿವ ಸಂತೋಷ ಲಾಡ್ ಅವರಿಗೆ ಮನವಿ ಸಲ್ಲಿಸಿದರು.
ಅಳ್ನಾವರ ತಾಲೂಕಿನ ಹುಲ್ಲಿಕೇರಿ ಗ್ರಾಮದಲ್ಲಿ ರವಿರಾಜ್ ಅವರು ಲಾಡ್ ಅವರಿಗೆ ಮನವಿ ಸಲ್ಲಿಸಿ, ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವೇ ಇದೆ. ಅಲ್ಲಿ ರೈತರ ಸಾಲ ಮನ್ನಾ ಮಾಡಲಾಗಿದೆ. ಮಹಾರಾಷ್ಟ್ರದಲ್ಲೂ ಕಾಂಗ್ರೆಸ್ ಇದ್ದಾಗ ಸಾಲ ಮನ್ನಾ ಮಾಡಲಾಗಿತ್ತು. ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದ್ದು, ಇಲ್ಲಿಯೂ ರೈತರ ಸಾಲ ಮನ್ನಾ ಮಾಡಬೇಕು ಎಂದು ರವಿರಾಜ್ ಆಗ್ರಹಿಸಿದರು.
ಇದರಿಂದ ತಾಳ್ಮೆ ಕಳೆದುಕೊಂಡ ಸಚಿವ ಲಾಡ್, ರೈತ ಮುಖಂಡನ ಜೊತೆ ಮಾತಿನ ಚಕಮಕಿಗೆ ಇಳಿದರು. ರೈತ ಮುಖಂಡ ಕಾಂಗ್ರೆಸ್ ಎಂದು ಉಲ್ಲೇಖಿಸಿದ್ದಕ್ಕೆ ಗರಂ ಆದ ಲಾಡ್, ಬಿಜೆಪಿ ಇಲ್ಲಿಯವರೆಗೂ ಎಷ್ಟು ಸಾಲ ಮನ್ನಾ ಮಾಡಿದೆ ಹೇಳಿ? ಕೇಂದ್ರ ಸರ್ಕಾರ ಎಷ್ಟು ಬಾರಿ ರೈತರ ಸಾಲ ಮನ್ನಾ ಮಾಡಿದೆ? ಬಾಯಿ ಬಿಟ್ಟು ಹೇಳಿ ಎಂದು ಏರು ಧ್ವನಿಯಲ್ಲೇ ರೈತ ಮುಖಂಡನೊಂದಿಗೆ ವಾಗ್ವಾದಕ್ಕಿಳಿದರು.
ಯುಪಿಎ ಸರ್ಕಾರ ಇದ್ದಾಗ 72 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಗಿದೆ. ರಾಜ್ಯದಲ್ಲಿ 2013ರ ನಂತರ 165 ಕೋಟಿ ಸಿದ್ದರಾಮಯ್ಯನವರ ಸರ್ಕಾರ ಮನ್ನಾ ಮಾಡಿದೆ. ಕೋಆಪರೇಟಿವ್ ಸೊಸೈಟಿಯದ್ದು 50 ಸಾವಿರದವರೆಗೆ ಮನ್ನಾ ಮಾಡಲಾಗಿದೆ. ಅದನ್ನೂ ನೀವು ಬಾಯಿ ಬಿಟ್ಟು ಹೇಳಿ ಎಂದು ರೈತ ಮುಖಂಡನಿಗೆ ಹೇಳುತ್ತ, ವಾಹನ ಹತ್ತಿ ಹೊರಟರು.
ಆಗ ರೈತ ಮುಖಂಡ ಹಳೆಯ ಕಥೆ ಬೇಡ ಸರ್ ಸದ್ಯದ ಪರಿಸ್ಥಿತಿ ಬಗ್ಗೆ ಮಾತನಾಡಿ ಎಂದಿದ್ದಕ್ಕೆ ವಾಪಸ್ ಕಾರು ಇಳಿದು ಬಂದು, ನೀವು ಸಾಲ ಮನ್ನಾ ಮಾಡಿ ಎಂದಿದ್ದರೆ ಸಾಕಾಗಿತ್ತು. ಕಾಂಗ್ರೆಸ್ ಹೆಸರು ಏಕೆ ಪ್ರಸ್ತಾಪಿಸಿದಿರಿ? ಬಿಜೆಪಿ ಕೂಡ ತನ್ನ ಪ್ರಣಾಳಿಕೆಯಲ್ಲಿ ಸಾಲ ಮನ್ನಾ ಮಾಡುವ ವಿಚಾರ ಹೇಳಿತ್ತು. ಮೊದಲು ಅದನ್ನು ಓದಿಕೊಳ್ಳಿ. ರೈತರ ಸಾಲ ಮನ್ನಾ ಮಾಡಿದ್ದು ಕಾಂಗ್ರೆಸ್. ಬಿಜೆಪಿ ಅಲ್ಲ, 11 ವರ್ಷದಿಂದ ಕೇಂದ್ರದಲ್ಲಿ ಬಿಜೆಪಿ ಇದೆ. 19 ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ ಯಾರೂ ಸಾಲ ಮನ್ನಾ ಮಾಡಿಲ್ಲ ಎಂದು ಸಚಿವ ಲಾಡ್ ಅವರು ತಾಳ್ಮೆ ಕಳೆದುಕೊಂಡು ಕೂಗಾಡಿದ ಪ್ರಸಂಗ ನಡೆಯಿತು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
23/11/2024 08:18 am