ಧಾರವಾಡ: ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಆರು ಜನ ರೈತರ ಪಹಣಿಯ ಕಾಲಂ ನಂಬರ್ 11ರಲ್ಲಿ ವಕ್ಫ ಆಸ್ತಿ ಎಂದು ನಮೂದಾಗಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ ದೊಡ್ಡಪ್ಪ ಹೂಗಾರ ಪ್ರತಿಕ್ರಿಯೆ ನೀಡಿದ್ದಾರೆ.
ಧಾರವಾಡದಲ್ಲಿ ಮಾತನಾಡಿರುವ ಅವರು, ನಮ್ಮಲ್ಲಿ 1979, 2014 ಹಾಗೂ 2020ರಲ್ಲಿ ಗೆಜೆಟ್ ಆಗಿದ್ದವು. ಈ ವೇಳೆ ಕಂದಾಯ ಇಲಾಖೆಗೆ ಸಂಬಂಧಿಸಿದ 113 ಆಸ್ತಿಗಳು ದಾಖಲಾಗಿದ್ದವು. ಅದರಲ್ಲಿ 22 ಆಸ್ತಿಗಳ ಕಾಲಂ ನಂಬರ್ 9 ಹಾಗೂ 11 ರಲ್ಲಿ ಈ ಆಸ್ತಿ ವಕ್ಫ ಆಸ್ತಿಗೆ ಒಳಪಟ್ಟಿದೆ ಎಂದು ನಮೂದಾಗಿತ್ತು. ಇದನ್ನು 2018ರಲ್ಲೇ ನಮೂದಿಸಲಾಗಿತ್ತು. ಇದರ ಮುಂದುವರಿದ ಭಾಗವಾಗಿ ಉಪ್ಪಿನ ಬೆಟಗೇರಿ ಗ್ರಾಮದ ರೈತರು ತಮ್ಮದು ಮಾಲ್ಕಿ ಜಮೀನು ಇದ್ದರೂ ವಕ್ಫ ಆಸ್ತಿ ಎಂದು ನಮೂದಾಗಿದ್ದು, ಇದನ್ನು ಸರಿಪಡಿಸಿಕೊಡುವಂತೆ ಅರ್ಜಿ ಸಲ್ಲಿಸಿದ್ದರು ಎಂದರು.
ಈ ಬಗ್ಗೆ ವಕ್ಫ ಅಧಿಕಾರಿಗಳಿಗೂ ನೋಟಿಸ್ ಕೊಟ್ಟು ಸಭೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಅವರೂ ಸಭೆಗೆ ಹಾಜರಾಗಿದ್ದರು. 1965 ರಲ್ಲಿ ಸರ್ವೆ ನಂಬರ್ ಇದ್ದವುಗಳು ಬ್ಲಾಕ್ ನಂಬರ್ ಆಗಿ ಬದಲಾವಣೆಯಾದಾಗ ಈ ಸಮಸ್ಯೆಯಾಗಿದೆ. ಈ ಬಗ್ಗೆ ಕೋರ್ಟ್ ನಡೆಸಲಾಗಿದ್ದು, ಎರಡ್ಮೂರು ದಿನದಲ್ಲಿ ಈ ಸಮಸ್ಯೆ ಬಗೆಹರಿಸಲಾಗುವುದು ಎಂದರು.
ವಕ್ಫ ಗೆಜೆಟ್‌ನಲ್ಲಿ ಹಳೇ ಸರ್ವೆ ನಂಬರ್ ಕೊಡಲಾಗಿತ್ತು. ಅದು ಬ್ಲಾಕ್ ನಂಬರ್ ಆದ ಮೇಲೆ ಚೇಂಜ್ ಆಗಿದೆ. ಹೀಗಾದಾಗ ಮಾಲೀಕರು ವ್ಯತ್ಯಾಸ ಆಗುತ್ತಾರೆ. ಸರ್ವೆ ನಂಬರ್ ಇದ್ದದ್ದು ಬ್ಲಾಕ್ ನಂಬರ್ ಆಬ ಬದಲಾಗುವಾಗ ಸಮಸ್ಯೆಯಾಗಿರುತ್ತದೆ. ವಕ್ಫ ಅಧಿಕಾರಿಗಳು ಕೂಡ ತಮ್ಮಿಂದ ರೈತರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಎನ್‌ಓಸಿ ಕೊಟ್ಟಿದ್ದಾರೆ. ಇದಕ್ಕೆ ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಉಪ್ಪಿನ ಬೆಟಗೇರಿಯ ಆರೂ ಕೇಸ್‌ಗಳನ್ನು ನಾವು ಈಗ ಸರಿಪಡಿಸಿದ್ದೇವೆ ಎಂದರು.
Kshetra Samachara
06/11/2024 01:51 pm