ನವಲಗುಂದ : ದೇಶ ಮತ್ತು ಸಮಾಜಕ್ಕಾಗಿ ಸೇವೆ ಸಲ್ಲಿಸುವ ಅಮೂಲ್ಯ ಅವಕಾಶ ಸರ್ಕಾರಿ ನೌಕರರಿಗೆ ದೊರಕಿರುವುದರಿಂದ ಪ್ರತಿಯೊಬ್ಬ ಸರ್ಕಾರಿ ನೌಕರನೂ ಸಹ ಪ್ರಾಮಾಣಿಕವಾಗಿ ಜನರಿಗೆ ಸರ್ಕಾರಿ ಸೌಲಭ್ಯಗಳನ್ನು ನೀಡಬೇಕು. ಯಾವುದೇ ಆಸೆ ಆಕಾಂಕ್ಷೆಗಳಿಗೂ ಬಲಿಯಾಗದೆ, ನೈತಿಕತೆಯಿಂದ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ಧಾರವಾಡ ಲೋಕಾಯುಕ್ತ ಡಿಎಸ್ ಪಿ ವೆಂಕಣಗೌಡ ಪಾಟೀಲ ಹೇಳಿದರು.
ತಾಲೂಕಾ ಪಂಚಾಯತಿ ಸಭಾಭಾವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕಾ ಆಡಳಿತ, ತಾಲೂಕ ಪಂಚಾಯತ್, ಪುರಸಭೆ, ಪೊಲೀಸ್ ಇಲಾಖೆ, ಕರ್ನಾಟಕ ಲೋಕಾಯುಕ್ತ, ಧಾರವಾಡ ಇವರ ಸಹಯೋಗದೊಂದಿಗೆ “ಜಾಗೃತಿ ಅರಿವು ಸಪ್ತಾಹ”-2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಅಧಿಕಾರಿಗಳು ಮತ್ತು ಸಾರ್ವಜನಿಕರ ಸಹಕಾರದಿಂದ ಮಾತ್ರ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಹಶೀಲ್ದಾರ ಸುಧೀರ ಸಾಹುಕಾರ ಮಾತನಾಡಿ, ಸರ್ಕಾರದ ಸೌಲಭ್ಯಗಳು ಸಾರ್ವಜನಿಕರಿಗೆ ಅತೀ ಸುಲಭವಾಗಿ ದೊರಕುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಲಂಚ ಪಡೆಯುವುದು ಮತ್ತು ಲಂಚ ನೀಡುವುದು ಎರಡು ಅಪರಾಧವಾಗಿದೆ. ಹಾಗಾಗಿ ಸಾರ್ವಜನಿಕರಿಗೆ ಇದರ ಕುರಿತು ತಿಳಿ ಹೇಳಬೇಕು. ಯಾವುದೇ ಇಲಾಖೆಯಲ್ಲಿ ಲಂಚ ನೀಡಬಾರದು ಎಂಬುದನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಹೇಳಿದರು.
ಇದೇ ವೇಳೆ ಲೋಕಾಯುಕ್ತ ಆರಕ್ಷಕ ನಿರೀಕ್ಷರಾದ ಪರಮೇಶ್ವರ ಕೌಟಗಿ ಅವರು ಭ್ರಷ್ಟಚಾರ ನಿರ್ಮೂಲನೆಯ ಪ್ರತಿಜ್ಞಾವಿಧಿ ಬೋಧಿಸಿದರು.
ತಾ.ಪಂ ಇಓ ಭಾಗ್ಯಶ್ರೀ ಜಹಗೀರದಾರ, ಸಿಪಿಐ ರವಿಕುಮಾರ ಕಪ್ಪತ್ತನವರ, ಪಿಎಸ್ಐ ಜನಾರ್ಧನ ಭಟ್ರಳ್ಳಿ, ಮುಖ್ಯಾಧಿಕಾರಿ ಎಸ್.ಪಿ.ಪೂಜಾರ ನ್ಯಾಯವಾದಿ ಸಿ.ಎಂ.ಪಾಟೀಲ ವೇದಿಕೆ ಮೇಲಿದ್ದರು. ಕಾರ್ಯಕ್ರಮದಲ್ಲಿ ತಾಲ್ಲೂಕಾ ಮಟ್ಟದ ಎಲ್ಲ ಅಧಿಕಾರಿಗಳು ಭಾಗವಹಿಸಿದ್ದರು.
Kshetra Samachara
05/11/2024 08:51 pm