ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಅಕ್ಟೋಬರ್ ತಿಂಗಳಿಡೀ ಎಡಬಿಡದೇ ಮಳೆ ಸುರಿದಿದೆ. ವಾಡಿಕೆಯನ್ನೂ ಮೀರಿ ಹತ್ತಾರು ಪಟ್ಟು ಮಳೆ ಸುರಿದ ಕಾರಣಕ್ಕೆ ಅಪಾರ ಪ್ರಮಾಣದ ಹಾನಿಯಾಗಿದ್ದು, ಸದ್ಯ ಜಿಲ್ಲೆಯ ಮಳೆ ಹಾನಿಯ ಪ್ರಾಥಮಿಕ ವರದಿಯನ್ನು ಸಿದ್ಧಪಡಿಸಿರುವ ಜಿಲ್ಲಾಡಳಿತ ಈಗ ಸಂಪೂರ್ಣ ಹಾನಿಯ ಸಮಗ್ರ ಸಮೀಕ್ಷೆಗೆ ಮುಂದಾಗಿದೆ. ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ.
ಧಾರವಾಡ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನ ಆರಂಭದ ವೇಳೆಯಲ್ಲಿ ಹಿಂದೆಂದೂ ಕಂಡರಿಯದಷ್ಟು ಮಳೆ ಸುರಿದಿದೆ. ಅಕ್ಟೋಬರ್‌ನಲ್ಲಿ ವಾಡಿಕೆಯಂತೆ 86 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಆದರೆ ವಾಸ್ತವವಾಗಿ ಹತ್ತಾರು ಪಟ್ಟು ಹೆಚ್ಚು ಮಳೆಯಾಗಿದೆ. ಹೀಗಾಗಿ ಅಪಾರ ಪ್ರಮಾಣದಲ್ಲಿ ಮುಂಗಾರು ಹಂಗಾಮಿನಿಂದಾಗಿ ಕೈಗೆ ಬಂದಿದ್ದ ಫಸಲು ಹಾಳಾಗಿದೆ.
ಸದ್ಯದ ಪ್ರಾಥಮಿಕ ವರದಿ ಪ್ರಕಾರ ಕೃಷಿ ಮತ್ತು ತೋಟಗಾರಿಕೆ ಬೆಳೆ ಸೇರಿ ಸುಮಾರು 65 ಸಾವಿರ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು 470ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಇದರಲ್ಲಿ 3 ಮನೆಗಳು ಸಂಪೂರ್ಣ ಬಿದ್ದಿವೆ. ಸದ್ಯ ಈ ಪ್ರಾಥಮಿಕ ವರದಿ ಆಧರಿಸಿ, ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಜಂಟಿ ಸಮೀಕ್ಷೆ ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಅಕ್ಟೋಬರ್ ತಿಂಗಳಿಡೀ ಎಡಬಿಡದೇ ಮಳೆ ಸುರಿದ ಕಾರಣಕ್ಕೆ ರೈತರು ಗದ್ದೆಗೆ ಕಾಲಿಡದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಅನೇಕ ಫಸಲು ಗದ್ದೆಯಲ್ಲಿಯೇ ಹಾಳಾಗಿ ಹೋಗಿದೆ. ಇದರಲ್ಲಿ ಮುಖ್ಯವಾಗಿ ಗೋವಿನಜೋಳ, ಹತ್ತಿ, ಕಡಲೆ, ಈರುಳ್ಳಿ, ಶೇಂಗಾ, ಮೆಣಸಿನಕಾಯಿ ಹಾಗೂ ಅನೇಕ ತರಕಾರಿ ಬೆಳೆಗಳು ಹಾನಿಯಾಗಿದೆ. ಆರಂಭದಲ್ಲಿ ಭತ್ತಕ್ಕೆ ಅಷ್ಟೊಂದು ಹಾನಿಯಾಗಿಲ್ಲ ಎನ್ನಲಾಗಿತ್ತು. ಆದರೆ ನಿರಂತರ ಮಳೆಯಿಂದ ಸಮೃದ್ಧವಾಗಿ ಬೆಳೆದು ನಿಂತಿದ್ದ ಭತ್ತ ನೆಲಕಚ್ಚಿದೆ.
ಕಳೆದ ವರ್ಷ ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಮತ್ತು ಹಿಂಗಾರು ಎರಡೂ ಹಂಗಾಮಿನಲ್ಲಿ ಸಂಪೂರ್ಣ ಬರ ಆವರಿಸಿತ್ತು. ಈ ಸಲ ಮುಂಗಾರು ಮಳೆ ಚೆನ್ನಾಗಿಯೇ ಕೈ ಹಿಡಿದಿತ್ತು. ಆದರೆ ಫಸಲು ಮನೆ ಸೇರುವ ವೇಳೆಯಲ್ಲಿಯೇ ಅಬ್ಬರಿಸಿದ್ದು, ರೈತ ನಷ್ಟ ಅನುಭವಿಸುವಂತಾಗಿದೆ. ಈಗ ರೈತರನ್ನು ಸರ್ಕಾರವೇ ಕಾಪಾಡಬೇಕಿದೆ.
Kshetra Samachara
05/11/2024 07:52 pm