ನವದೆಹಲಿ: ದೇಶದಲ್ಲಿ ಆಹಾರ ಧಾನ್ಯ ಬೆಲೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರ ಈಗ ಭಾರತ್ ಅಕ್ಕಿ-ಗೋಧಿ ಹಿಟ್ಟು ಪೂರೈಕೆಗೆ ಮುಂದಾಗಿದೆ.
ದೆಹಲಿಯಲ್ಲಿ ಇಂದು ಬೆಳಗ್ಗೆ ಕಡಿಮೆ ಬೆಲೆಗೆ ಗೋಧಿ ಹಿಟ್ಟು, ಅಕ್ಕಿ ಹಿಟ್ಟು, ಪೂರೈಸುವ ಸಂಚಾರಿ ವಾಹನಕ್ಕೆ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ದೇಶದ ಮಾರುಕಟ್ಟೆಯಲ್ಲಿ ಅಕ್ಕಿ, ಗೋಧಿ, ಬೇಳೆ ಸೇರಿದಂತೆ ಆಹಾರ ಧಾನ್ಯ ಬೆಲೆ ನಿಯಂತ್ರಣದಲ್ಲಿಡಲು ಭಾರತ್ ಬ್ರಾಂಡ್ ಅಡಿ ಕಡಿಮೆ ಬೆಲೆಗೆ ಆಹಾರ ಧಾನ್ಯ ವಿತರಿಸುತ್ತಿದೆ ಎಂದು ಹೇಳಿದರು.
ದೆಹಲಿಯ ಕೃಷಿ ಭವನದಲ್ಲಿ ರಾಜ್ಯ ಖಾತೆ ಸಚಿವ ಬಿ.ಎಲ್ ವರ್ಮಾ ಅವರ ಸಮ್ಮುಖದಲ್ಲಿ NCCF, NAFED ಮತ್ತು ಕೇಂದ್ರೀಯ ಭಂಡಾರ್‌ನ ಮೊಬೈಲ್ ವ್ಯಾನ್‌ಗಳಿಗೆ ಚಾಲನೆ ನೀಡುವ ಮೂಲಕ ಭಾರತ್ ಗೋಧಿ ಹಿಟ್ಟು ಮತ್ತು ಭಾರತ್ ಅಕ್ಕಿ ಚಿಲ್ಲರೆ ಮಾರಾಟದ 2ನೇ ಹಂತಕ್ಕೆ ಜೋಶಿ ಚಾಲನೆ ನೀಡಿದರು.
ಮೊದಲ ಹಂತದಲ್ಲಿ ಸುಮಾರು 15.20 ಲಕ್ಷ ಮೆಟ್ರಿಕ್ ಟನ್ ಭಾರತ್ ಗೋಧಿ ಹಿಟ್ಟು ಮತ್ತು 14.58 ಲಕ್ಷ ಮೆಟ್ರಿಕ್ ಟನ್ ಭಾರತ್ ರೈಸ್ ಅನ್ನು ಸಬ್ಸಿಡಿ ದರದಲ್ಲಿ ಗ್ರಾಹಕರಿಗೆ ವಿತರಿಸಲಾಗಿತ್ತು.
ಈಗ ಎರಡನೇ ಹಂತದ ಆರಂಭಿಕ ಹಂತದಲ್ಲಿ 3.69 ಲಕ್ಷ ಮೆಟ್ರಿಕ್ ಟನ್ ಗೋಧಿ ಮತ್ತು 2.91 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಚಿಲ್ಲರೆ ಮಾರಾಟದ ಮೂಲಕ ಪೂರೈಸಲಾಗುತ್ತಿದೆ ಎಂದು ಸಚಿವ ಪ್ರಲ್ಹಾದ ಜೋಶಿ ವಿವರಿಸಿದರು.
5-10 ಕೆಜಿ ಚೀಲದಲ್ಲಿ ಲಭ್ಯ: NCCF, NAFED ಮತ್ತು ಇ-ಕಾಮರ್ಸ್/ಬಿಗ್ ಚೈನ್ ರಿಟೇಲರ್ ಅಂಗಡಿಗಳಲ್ಲಿ ಮತ್ತು ಮೊಬೈಲ್ ವ್ಯಾನ್‌ಗಳಲ್ಲಿ ಭಾರತ್ ಹಿಟ್ಟು 5 ಕೆಜಿ,10 ಕೆಜಿ ಚೀಲಗಳಲ್ಲಿ ಗ್ರಾಹಕರಿಗೆ ಲಭ್ಯವಿರಲಿದೆ ಎಂದು ತಿಳಿಸಿದರು.
34 ರೂ. ಕೆಜಿ ಅಕ್ಕಿ ಮತ್ತು 29 ರೂ. ಕೆಜಿ ದರದಲ್ಲಿ ಗೋಧಿ ಹಿಟ್ಟು ಪೂರೈಸಲಾಗುವುದು. ಬೆಲೆ ನಿಯಂತ್ರಣ ಫಂಡ್ ಮೂಲಕ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
*9 ವರ್ಷಗಳಲ್ಲಿ ಬೆಲೆ ಸ್ಥಿರತೆ: ದೇಶದಲ್ಲಿ 9 ವರ್ಷಗಳಿಂದ ಅಗತ್ಯ ವಸ್ತುಗಳ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲಾಗಿದೆ. ಆದರೆ ಈ ವರ್ಷ ಬೇರೆ ಬೇರೆ ಕಾರಣಗಳಿಂದ ಬೆಲೆ ಏರಿಕೆಯಾಗುತ್ತಿದೆ. ಆದಾಗ್ಯೂ ಕೇಂದ್ರ ಸರ್ಕಾರ ಬೆಲೆ ಸ್ಥಿರತೆಗೆ ವಿವಿಧ ಕ್ರಮಗಳ ಮೂಲಕ ಪ್ರಯತ್ನ ಮಾಡಿದೆ ಎಂದು ಪ್ರತಿಪಾದಿಸಿದರು.
ರೈತರಿಗೆ ತೊಂದರೆ ಉಂಟಾಗಬಾರದೆಂದು ಸರ್ಕಾರವೇ ರೈತರಿಂದ ಆಹಾರ ಧಾನ್ಯ ಖರೀದಿ ಮಾಡಿ ಕಡಿಮೆ ಬೆಲೆಗೆ ಗ್ರಾಹಕರಿಗೆ ಮಾರಾಟ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
PublicNext
05/11/2024 10:14 pm