ಕಾರವಾರ (ಉತ್ತರಕನ್ನಡ): ಕಟ್ಟಿಗೆ ತರಲೆಂದು ಕಾಡಿಗೆ ತೆರಳಿ ನಾಪತ್ತೆಯಾಗಿದ್ದ ಮಹಿಳೆಯೋರ್ವರ ಮೃತದೇಹ 18 ದಿನಗಳ ಬಳಿಕ ಇದೀಗ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಭಟ್ಕಳ ತಾಲೂಕಿನ ಬೇಂಗ್ರೆ ಮಹಾದೇವಿ ದೇವಾಡಿಗ (57) ಮೃತ ಮಹಿಳೆ. ಈಕೆ ಸೆ.17ರಂದು ಕಟ್ಟಿಗೆ ತರಲು ಬೇಂಗ್ರೆಯ ಅರಣ್ಯಕ್ಕೆ ಹೋಗಿದ್ದಳು. ಆದರೆ ಸಂಜೆಯಾದರು ಮನೆಗೆ ಬಾರದೆ ಇರುವುದರಿಂದ ಮಹಿಳೆಯ ಮನೆಯವರು ಸಾಕಷ್ಟು ಹುಡುಕಾಡಿ, ನಂತರ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸ್ಥಳೀಯರು ಹಾಗೂ ಅರಣ್ಯ ಇಲಾಖೆಯ ನೆರವು ಪಡೆದು ಪೊಲೀಸರು ಕೂಡ ಸತತವಾಗಿ ಪತ್ತೆ ಕಾರ್ಯ ನಡೆಸಿದ್ದರೂ ಮಹಾದೇವಿಯ ಸುಳಿವು ಸಿಕ್ಕಿರಲಿಲ್ಲ. ಆದರೆ ಇಂದು ಮಹಿಳೆಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಧಿಕ ರಕ್ತದೊತ್ತಡ ಹಾಗೂ ಮಧುಮೇಹ ಕಾಯಿಲೆ ಹೊಂದಿದ್ದ ಮಹಾದೇವಿ, ಇದರಿಂದಾಗಿಯೇ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
Kshetra Samachara
05/10/2022 04:15 pm