ಭಟ್ಕಳ: ಮುರುಡೇಶ್ವರದಲ್ಲಿ ಮಂಗಳವಾರ ಸಂಜೆ ಸಮುದ್ರಪಾಲಾಗಿದ್ದ ಕೋಲಾರದ ಮೂವರು ವಿದ್ಯಾರ್ಥಿನಿಯರ ಮೃತದೇಹಗಳು ಇಂದು ಪತ್ತೆಯಾಗಿವೆ.
ಕೋಲಾರ ಜಿಲ್ಲೆಯ ಮುಳುಬಾಗಿಲು ತಾಲೂಕಿನ ಎಂ.ಕೊತ್ತೂರು ಗ್ರಾಮದ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿಯರಾದ ದೀಕ್ಷಾ ಜೆ. (15), ಲಾವಣ್ಯಾ (15), ಮತ್ತು ವಂದನಾ (15) ಮೃತಪಟ್ಟವರು.
ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ಕಣ್ಮರೆಯಾಗಿದ್ದ ವಿದ್ಯಾರ್ಥಿನಿಯರ ಪತ್ತೆಗಾಗಿ ಕರಾವಳಿ ಕಾವಲು, ಪೊಲೀಸ್ ಪಡೆಯು ಸ್ಥಳೀಯ ಮೀನುಗಾರರ ಸಹಕಾರದಲ್ಲಿ ಇಂದು ಮುಂಜಾನೆಯಿಂದ ಶೋಧ ಮುಂದುವರಿಸಿದ್ದರು.
ದೀಕ್ಷಾ ಹಾಗೂ ಲಾವಣ್ಯಾರ ಮೃತದೇಹಗಳು ಇಲ್ಲಿನ ಆರ್.ಎನ್.ಎಸ್. ರೆಸಿಡೆನ್ಸಿ ಹಿಂಭಾಗದ ಸಮುದ್ರ ತೀರದ ಕಲ್ಲುಬಂಡೆ ಸಮೀಪ ಪತ್ತೆಯಾಗಿದ್ದು, ವಂದನಾ ಮೃತದೇಹ ಸಮೀಪದ ಗುಡ್ಡದ ಕೆಳಭಾಗದಲ್ಲಿ ಪತ್ತೆಯಾಗಿದೆ.
ಇವರೊಂದಿಗೆ ಸಮುದ್ರಪಾಲಾಗಿದ್ದ ಇನ್ನೋರ್ವ ವಿದ್ಯಾರ್ಥಿನಿ ಶ್ರಾವಂತಿ ಗೋಪಾಲಪ್ಪ(15) ಮೃತಪಟ್ಟಿದ್ದಾಳೆ.
ಮಂಗಳವಾರ ಸಮುದ್ರದಲ್ಲಿ ಸ್ನಾನಕ್ಕಿಳಿದ ಒಟ್ಟು ಏಳು ವಿದ್ಯಾರ್ಥಿಗಳು ಅಲೆಗಳ ಸುಳಿಗೆ ಸಿಲುಕಿದ್ದರು. ಈ ಪೈಕಿ ಮೂವರನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದರು.
ದುರಂತಕ್ಕೆ ಸಂಬಂಧಿಸಿದಂತೆ ಕೊತ್ತೂರು ವಸತಿ ಶಾಲೆ ಪ್ರಾಂಶುಪಾಲೆ ಶಶಿಕಲಾ ಹಾಗೂ ಅತಿಥಿ ಶಿಕ್ಷಕರನ್ನು ಅಮಾನತು ಮಾಡಲಾಗಿದ್ದು, ತನಿಖೆಗೆ ಆದೇಶ ಹೊರಡಿಸಲಾಗಿದೆ. ಮೃತರ ಕುಟುಂಬಗಳಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ತಲಾ 5 ಲಕ್ಷ ರೂಗಳ ಪರಿಹಾರ ಘೋಷಿಸಲಾಗಿದೆ.
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕ ಮಂಜುನಾಥ್, ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ, ಜಿಲ್ಲಾ ವರಿಷ್ಠಾಧಿಕಾರಿ ಎಂ ನಾರಾಯಣ, ಭಟ್ಕಳ ಉಪವಿಭಾಗಾಧಿಕಾರಿ ಡಾ. ನಯನಾ, ತಹಶೀಲ್ದಾರ್ ಅಶೋಕ ಭಟ್, ಭೇಟಿ ನೀಡಿ, ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದರು.
PublicNext
11/12/2024 04:35 pm