ಜಗತ್ತಿನಲ್ಲಿ ಎಲ್ಲ ಸಂಪತ್ತಿಗಿಂತ ಶ್ರೇಷ್ಠವಾದ ಮತ್ತು ಅಮೂಲ್ಯವಾದ ಸಂಪತ್ತೆಂದರೆ ಅದು ವಿದ್ಯೆ ಮಾತ್ರ. ಅದನ್ನು ಯಾರಿಂದಲೂ, ಯಾವತ್ತಿಗೂ ಕದಿಯಲು ಸಾಧ್ಯವಿಲ್ಲ. ನಮ್ಮಲ್ಲಿ ಎಷ್ಟು ಸಂಪತ್ತು ಇದೆ ಎನ್ನುವುದಕ್ಕಿಂತ ಅದರ ಸದ್ವಿನಿಯೋಗದ ಕುರಿತು ಚಿಂತನೆ ಮಾಡಬೇಕು ಎಂದು ಉಡುಪಿ ಶ್ರೀ ಅದಮಾರು ಮಠದ ಶ್ರೀ ಈಶಪ್ರೀಯ ತೀರ್ಥ ಶ್ರೀಪಾದರು ಹೇಳಿದರು.
ಅವರು ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್ ಹಾಗೂ ಪದವಿ ಪೂರ್ವ ಕಾಲೇಜಿನ ವಠಾರದಲ್ಲಿ ಪ್ರತಿಷ್ಠಾಪಿಸಿದ ಶ್ರೀ ಶಾರದಾ ದೇವಿ ಹಾಗೂ ಸ್ವಾಮಿ ವಿವೇಕಾನಂದರ ಪ್ರತಿಮೆಗಳನ್ನು ಅನಾವರಣಗೊಳಿಸಿ, ಆಶೀರ್ವಚಿಸಿದರು.
ದುಡ್ಡಿನಿಂದ ಎಲ್ಲವನ್ನು ಪಡೆದುಕೊಳ್ಳಬಹುದು ಎನ್ನುವುದು ಭ್ರಮೆ. ಶಾಂತಿ, ನೆಮ್ಮದಿ, ಪ್ರೀತಿ, ಆರೋಗ್ಯ ಸೇರಿದಂತೆ ಹಲವು ಪ್ರಮುಖ ಸಂಗತಿಗಳಿಗೆ ದುಡ್ಡು ಬೇಕಿಲ್ಲ. ನಿದ್ದೆಯೂ ಕೂಡ ಮನುಷ್ಯನ ಒಂದು ಸಂಪತ್ತೇ. ಎಲ್ಲ ಸಂಪತ್ತುಗಳಿದ್ದರೂ, ಅತ್ಯಮೂಲ್ಯವಾದ ನಿದ್ದೆಯ ಸಂಪತ್ತಿನಿಂದ ವಂಚಿತರಾದ ಹಲವರು ನಮಗೆ ಕಾಣ ಸಿಗುತ್ತಾರೆ. ಸರಿಯಾದ ಶಿಕ್ಷಣ ಹಾಗೂ ಭಾಷಾ ಜ್ಞಾನ ಇರುವವರು ಪ್ರಪಂಚದಲ್ಲಿ ಎಲ್ಲಿಯೂ ಕೂಡ ನೆಮ್ಮದಿಯ ಬದುಕನ್ನು ಸಾಧಿಸುತ್ತಾರೆ. ಪ್ರತಿಯೊಬ್ಬರ ಬದುಕಿಗೂ ಸಿಗಬೇಕು ಅನ್ನುವ ದೈವ ಸಂಕಲ್ಪವಿದ್ದರೆ ಅದು ಖಂಡಿತ ಸಿಕ್ಕೆ ಸಿಗುತ್ತದೆ. ಅದರೊಂದಿಗೆ ಪ್ರಾಮಾಣಿಕ ಪ್ರಯತ್ನವೂ ಇರಬೇಕು ಎಂದರು.
ಗುರುಕುಲ ವಿದ್ಯಾ ಸಂಸ್ಥೆಯ ಶಿಕ್ಷಕ ತಿಲಕ್ ಮಾತನಾಡಿದರು. ಪುತ್ಥಳಿ ನಿರ್ಮಿಸಿದ ಶಿಲ್ಪಿ ವೇಣುಗೋಪಾಲ ಆಚಾರ್ಯ ಕುಂಬ್ಳೆಯವರನ್ನು ಸಮ್ಮಾನಿಸಲಾಯಿತು.
ಬಾಂಡ್ಯ ಎಜುಕೇಶನಲ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್‌ನ ಜಂಟಿ ಆಡಳಿತ ನಿರ್ದೇಶಕ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ, ಪುರುಷೋತ್ತಮ್ ಅಡ್ವೆ, ಗುರುಕುಲ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲ ಮೋಹನ್ ಕೆ., ಗುರುಕುಲ ಪ.ಪೂ. ಕಾಲೇಜಿನ ಪ್ರಾಂಶುಪಾಲ ಅರುಣ್ ಡಿಸಿಲ್ವ ಮತ್ತಿತರರು ಉಪಸ್ಥಿತರಿದ್ದರು.
ಬಾಂಡ್ಯ ಎಜುಕೇಶನಲ್ ಟ್ರಸ್ಟ್‌ನ ಜಂಟಿ ಆಡಳಿತ ನಿರ್ದೇಶಕಿ ಅನುಪಮ ಎಸ್. ಶೆಟ್ಟಿ ಪ್ರಸ್ತಾವಿಸಿ, ಸ್ವಾಗತಿಸಿದರು. ಗುರುಕುಲ ಶಿಕ್ಷಣ ಸಂಸ್ಥೆಯ ಸಂಯೋಜಕಿ ವಿಶಾಲ ಶೆಟ್ಟಿ ಕಾರ್‍ಯಕ್ರಮ ನಿರೂಪಿಸಿ, ಶಿಕ್ಷಕ ರಾಘವೇಂದ್ರ ಅಮ್ಮುಜೆ ವಂದಿಸಿದರು.
PublicNext
01/10/2022 04:55 pm