ಗದಗ: ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಸವರಾಜ ಗುರಿಕಾರ ಅವರು, ಮಂಗಳವಾರ ಗದಗ ಜಿಲ್ಲೆಯ ವಿವಿಧ ಊರುಗಳಲ್ಲಿ ಅಬ್ಬರದ ಪ್ರಚಾರ ನಡೆಸಿದರು.
ಗದಗ ಜಿಲ್ಲೆಯ ನರೇಗಲ್‌ನ ಅನ್ನದಾನ ವಿಜಯ ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆ ಮತ್ತು ಕಾಲೇಜು, ನಿಡಗುಂದಿಯ ಅನ್ನದಾನೇಶ್ವರ ಪ್ರೌಢ ಶಾಲೆ, ಸೂಡಿಯ ಗುರು ಮಹಾಂತೇಶ ಸಂಯುಕ್ತ ಮಹಾವಿದ್ಯಾಲಯ, ಗಜೇಂದ್ರಗಡದ ಜಗದಂಬಾ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಕಾಲಕಾಲೇಶ್ವರದ ಮುರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ ಸೇರಿದಂತೆ ಅನೇಕ ಕಡೆಗಳಲ್ಲಿ ಗುರಿಕಾರ ಅವರು ಬಿರುಸಿನ ಪ್ರಚಾರ ನಡೆಸಿದರು.
ಉತ್ತರ ಕನ್ನಡ, ಗದಗ, ಹಾವೇರಿ ಹಾಗೂ ಧಾರವಾಡ ಜಿಲ್ಲೆಗಳನ್ನೊಳಗೊಂಡು ಈ ಚುನಾವಣೆ ನಡೆಯುತ್ತಿದ್ದು, ಗುರಿಕಾರ ಅವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ನಾಲ್ಕೂ ಜಿಲ್ಲೆಯಲ್ಲಿ ಸುತ್ತಾಡಿ ಶಿಕ್ಷಕರನ್ನು ತಲುಪಿ ಮತಯಾಚನೆ ಮಾಡುತ್ತಿದ್ದಾರೆ. ಗದಗ ಜಿಲ್ಲೆಯ ವಿವಿಧ ಊರುಗಳಲ್ಲಿ ನಡೆದ ಪ್ರಚಾರಕ್ಕೆ ಕಾಂಗ್ರೆಸ್ ಮುಖಂಡರು ಕೂಡ ಗುರಿಕಾರ ಅವರಿಗೆ ಸಾಥ್ ನೀಡಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷರಾಗಿ ಕೆಲಸ ಮಾಡಿರುವ ನಾನು ಶಿಕ್ಷಕರ ಅನೇಕ ಸಮಸ್ಯೆಗಳನ್ನು ಬಲ್ಲವನಾಗಿದ್ದೇನೆ. ಯಾವುದೇ ಅಧಿಕಾರ ಇಲ್ಲದಿದ್ದರೂ ಹೋರಾಟದ ಮುಖಾಂತರ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ ಆ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಿದ್ದೇನೆ. ನಿರಂತರ 42 ವರ್ಷಗಳಿಂದ ಈ ಕ್ಷೇತ್ರವನ್ನು ಪ್ರತಿನಿಧಿಸಿ ವಿಧಾನ ಪರಿಷತ್‌ಗೆ ಆಯ್ಕೆಯಾದವರು ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ಕೇವಲ ಭರವಸೆಗಳನ್ನೇ ಕೊಟ್ಟಿದ್ದಾರೆ ಹೊರತು ಆದರೆ, ಆ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ. ಹೀಗಾಗಿ ಒಂದು ಅವಕಾಶವನ್ನು ಶಿಕ್ಷಕರು ನನಗೆ ಕೊಡಬೇಕಿದೆ. ಕಾಲ್ಪನಿಕ ವೇತನದ ಸಮಸ್ಯೆ ಸೇರಿದಂತೆ ಇತ್ಯಾದಿ ಸಮಸ್ಯೆಗಳಿಗೆ ನಾನು ಶಿಕ್ಷಕರ ಪ್ರತಿನಿಧಿಯಾಗಿ ಕೆಲಸ ಮಾಡುತ್ತೇನೆ ಎಂದು ಬಸವರಾಜ ಗುರಿಕಾರ ಈ ಸಂದರ್ಭದಲ್ಲಿ ತಿಳಿಸಿದರು.
ನಂತರ ಗದಗ ಜಿಲ್ಲೆಯ ಅನೇಕ ಊರು, ಶಾಲೆಗಳಿಗೆ ತೆರಳಿದ ಗುರಿಕಾರ ಅವರಿಗೆ ಶಿಕ್ಷಕ ಸಮುದಾಯದಿಂದ ಸಕಾರಾತ್ಮಕ ಸ್ಪಂದನೆ ದೊರೆಯಿತು.
PublicNext
07/06/2022 09:30 pm