ಹೈದರಾಬಾದ್: ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಬಹು ನಿರೀಕ್ಷಿತ ಪುಷ್ಪ 2 ಚಿತ್ರದ ಫಸ್ಟ್ ಶೋ ವೇಳೆ 35 ವರ್ಷದ ಮಹಿಳೆಯೊಬ್ಬರು ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದ ನಾಯಕ ನಟ ಅಲ್ಲು ಅರ್ಜುನ್ ಅವರನ್ನು ಹೈದರಾಬಾದ್ ಪೊಲೀಸರು ಶುಕ್ರವಾರ ಮಧ್ಯಾಹ್ನ ಬಂಧಿಸಿದ್ದರು.
ಖಾಸಗಿ ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ನಿರೂಪಕರೊಬ್ಬರು ನಟ ಅಲ್ಲು ಅರ್ಜುನ್ ಬಂಧನ ಖಂಡಿಸಿದ ನಡೆಯುತ್ತಿರುವ ಪ್ರತಿಭಟನೆಗಳ ವಿಚಾರವಾಗಿ ಪ್ರಶ್ನೆ ಕೇಳಿದ್ದಕ್ಕೆ ತೆಲಂಗಾಣದ ಸಿಎಂ ರೇವಂತ್ ರೆಡ್ಡಿ ಖಡಕ್ ಉತ್ತರ ನೀಡಿದ್ದಾರೆ. ಅವರ ಉತ್ತರಕ್ಕೆ ಅನೇಕರು ಚಪ್ಪಾಳೆ ಕೂಡ ತಟ್ಟಿದ್ದಾರೆ.
ಸಿಎಂ ರೇವಂತ್ ರೆಡ್ಡಿ ಹೇಳಿದ್ದೇನು?:
'ಚಿಕ್ಕಪುಟ್ಟ ವಿಚಾರಕ್ಕೂ ಪ್ರತಿಭಟನೆಗಳು ನಡೆಯುತ್ತಿರುವುದು ಸಾಮಾನ್ಯವಾಗಿದೆ. ಹತ್ತೋ ಇಪ್ಪತ್ತೋ ಜನರು ಸೇರಿ ನಿಂತರೆ ಸಾಕು ಪ್ರತಿಭಟನೆ ಅನಿಸುಕೊಳ್ಳುತ್ತದೆ. ಒಂದು ವೇಳೆ ಪರ್ಮಿಷನ್ ತೆಗೆದುಕೊಳ್ಳದೆ ಪ್ರತಿಭಟನೆ ಮಾಡಿದರೆ ಅವರು ಕೂಡ ಜೈಲ್‌ಗೆ ಹೋಗುತ್ತಾರೆ. ಇದಲ್ಲಿ ಯಾವ ವ್ಯತ್ಯಾಸ ಇದೆ. ಒಬ್ಬ ವ್ಯಕ್ತಿಯನ್ನು ಪೊಲೀಸ್ ಸ್ಟೇಷನ್‌ಗೆ ಕರೆದುಕೊಂಡು ಹೋಗಿದ್ದಕ್ಕೆ ಇಷ್ಟು ಚರ್ಚೆ ಮಾಡುತ್ತಿದ್ದೀರಲ್ಲ ಹಾಗಾದರೆ ಒಬ್ಬ ಮಹಿಳೆಯ ಜೀವಕ್ಕೆ ಬೆಲೆ ಇಲ್ಲವೇ? ಈ ಬಗ್ಗೆ ಯಾರೊಬ್ಬರೂ ಧ್ವನಿ ಎತ್ತುತ್ತಿಲ್ಲ. ಆ ಬಡ ಕುಟುಂಬ ಕೂಡ ಅಲ್ಲು ಅರ್ಜುನ್ ಫ್ಯಾನ್ಸ್. ಆ ಕುಟುಂಬದ ಮಗು ಇನ್ನೂ ಆಸ್ಪತ್ರೆಯಲ್ಲಿದೆ. ಕೋಮಾದಲ್ಲಿರುವ ಬಾಲಕ ಹೊರಗೆ ಬಂದರೆ ಅವನ ಮುಂದಿನ ಜೀವನ ಹೇಗೆ? ಈ ಬಗ್ಗೆ ಮಾಧ್ಯಮಗಳು ಒಂದೇ ಒಂದು ಪ್ರಶ್ನೆ ಮಾಡಲಿಲ್ಲ' ಎಂದು ಕಿಡಿಕಾರಿದರು.
ಸಿನಿಮಾಕ್ಕೆ ಹಣ ಹಾಕಿ ದೊಡ್ಡ ಮೊತ್ತದ ಹಣ ಗಳಿಸುವುದು ಅವರ ಕೆಲಸ. ಇದರಲ್ಲಿ ಕೊಡಲು, ತೆಗೆದುಕೊಳ್ಳಲು ಏನಿದೆ.? ರಿಯಲ್ ಎಸ್ಟೇಟ್ ವ್ಯಕ್ತಿ ಜಾಗ ಖರೀದಿಸುತ್ತಾನೆ. ಮಾರಿ ಲಾಭ ಗಳಿಸುತ್ತಾನೆ. ಅಲ್ಲು ಅರ್ಜುನ್ ಲಾಭ ಮಾಡಿಕೊಂಡರೆ ನಮಗೇನೂ ಲಾಭ ಇಲ್ಲ. ಅವರೇನು ಗಡಿಗೆ ಹೋಗಿ ಯುದ್ಧ ಮಾಡಿ ಬಂದಿದ್ದಾರಾ ಎಂದು ಪ್ರಶ್ನಿಸಿದರು.
PublicNext
15/12/2024 02:39 pm