ಬೆಂಗಳೂರು: ಶೋಭಾ ಕರಂದ್ಲಾಜೆ ಅವರು ನಾನು ಕೇಂದ್ರ ಸಚಿವೆ ಮೈಸೂರು ಅತ್ಯಾಚಾರ ಪ್ರಕರಣದ ಬಗ್ಗೆ ಮಾತನಾಡಲ್ಲ ಎನ್ನುತ್ತಾರೆ. ಸಚಿವೆಯಾದರೂ ಹೆಣ್ಣು ಹೆಣ್ಣೇ ಅಲ್ವಾ? ತಮ್ಮ ಮನೆಯಲ್ಲೇ ಇಂತಹ ಘಟನೆ ನಡೆದಿದ್ದರೆ ಹೀಗೆ ಮಾತನಾಡುತ್ತಿದ್ದರಾ ಎಂದು ಮಾಜಿ ಸಚಿವ ಹೆಚ್.ಎಂ. ರೇವಣ್ಣ ಕೇಂದ್ರ ಪ್ರಶ್ನಿಸಿ ಅಸಮಾಧಾನ ಹೊರ ಹಾಕಿದ್ದಾರೆ.
ಮೈಸೂರು ಅತ್ಯಾಚಾರ ಪ್ರಕರಣದ ಕಾಂಗ್ರೆಸ್ ಸತ್ಯ ಶೋಧನಾ ಸಮಿತಿ ಸದಸ್ಯರೂ ಆಗಿರುವ ರೇವಣ್ಣ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಶನಿವಾರ ಭೇಟಿ ನೀಡಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ವೈದ್ಯರು ಅತ್ಯಾಚಾರ ನಡೆದಿದೆ ಎಂದು ತಿಳಿಸಿದ್ದಾರೆ. ಪೊಲೀಸರು ದರೋಡೆ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಘಟನೆ ರಾತ್ರಿ 7:30ರಿಂದ 9 ಗಂಟೆ ನಡುವೆ ನಡೆದಿದೆ. 10 ಗಂಟೆಗೆ ಆಸ್ಪತ್ರೆಗೆ ಹೋಗಿದ್ದಾರೆ. 10-45 ಕ್ಕೆ ಪೊಲೀಸರ ಗಮನಕ್ಕೆ ಬಂದರೂ ಕೇಸ್ ದಾಖಲಿಸಲು ತಡ ಮಾಡಿದ್ದಾರೆ. ಪೊಲೀಸರ ಮೇಲೆ ಸರ್ಕಾರ ಒತ್ತಡ ತಂದಿದೆ ಎಂದು ಆರೋಪಿಸಿದರು.
ಮೈಸೂರಿನಂತ ನಗರದಲ್ಲಿ ಅತ್ಯಾಚಾರ ಆಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಆಯ್ತು ಅಂತ ಕೆಟ್ಟ ಹೆಸರು ಬರಬಾರದು ಅಂತ ಸರ್ಕಾರ ಪೊಲೀಸರ ಮೇಲೆ ಒತ್ತಡ ತಂದು ಕೇಸು ದಾಖಲಿಸಲು ತಡ ಮಾಡಿದೆ ಎಂದು ಹೆಚ್.ಎಂ. ರೇವಣ್ಣ ದೂರಿದರು.
ಸಂತ್ರಸ್ತೆಗೆ ರಕ್ತಸ್ರಾವ ಆಗಿದ್ದು, ಮೈಮೇಲೆ ಸಾಕಷ್ಟು ಗಾಯವಾಗಿದೆ. ಕಾಂಗ್ರೆಸ್ ಸತ್ಯಶೋಧನಾ ಸಮಿತಿ ಮೈಸೂರು ಭೇಟಿ ಸಂದರ್ಭದಲ್ಲಿ ಇದು ನಮಗೆ ಗೊತ್ತಾಗಿದೆ. ಇಡೀ ಪ್ರಕರಣದಲ್ಲಿ ಪೊಲೀಸರ ವೈಫಲ್ಯ ಇದೆ. ಗೃಹ ಸಚಿವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
PublicNext
29/08/2021 08:23 am