ಬಂಟ್ವಾಳ: ಹಕ್ಕಿಜ್ವರ ಭೀತಿಯ ನಡುವೆಯೇ ದಕ್ಷಿಣ ಕನ್ನಡ ಜಿಲ್ಲೆಯ ಪಶುವೈದ್ಯಕೀಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯ ಸಮಸ್ಯೆಯೂ ಕಾಡುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಗೆ ಮಂಜೂರಾದ ಹುದ್ದೆಗಳು 434. ಕೆಲಸ ಮಾಡುತ್ತಿರುವವರ ಸಂಖ್ಯೆ 113. ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಹಸು, ಎಮ್ಮೆ, ಕೋಳಿ, ಕುರಿ, ನಾಯಿಗಳ ಆರೋಗ್ಯ ಕಾಪಾಡುವ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವೆ ನೀಡುವುದು ಇಷ್ಟೂ ಜನರ ಪ್ರಾಥಮಿಕ ಕರ್ತವ್ಯ. ಹಕ್ಕಿಜ್ವರ ಭೀತಿ ಎದುರಾದ ಮೇಲೆ ಜಿಲ್ಲೆಯ ಗಡಿಗಳಾದ ಜಾಲ್ಸೂರು, ಉಕ್ಕುಡ, ಸಾರಡ್ಕ, ಕೋಟೆಕಾರಿನಲ್ಲಿ ಕೋಳಿ ಸಾಗಾಟ ವಾಹನಗಳ ಮೇಲೆ ನಿಗಾ ಇಡುವ ಹೆಚ್ಚುವರಿ ಹೊಣೆಗಾರಿಕೆ. ಸದ್ಯಕ್ಕೆ ಗಡಿಯಲ್ಲಿ ಕೋಳಿ ಸಾಗಾಟಕ್ಕೆ ನಿಷೇಧ ಹೇರಲಾಗಿದ್ದರೂ ತಪ್ಪಿ ಬರುತ್ತಿವೆಯೇ ಎಂಬುದಕ್ಕೂ ನಿಗಾ ಇರಿಸಬೇಕು.
ಬಂಟ್ವಾಳ ತಾಲೂಕಿನಲ್ಲಿ 44 ಸಾವಿರ ಹಸುಗಳಿವೆ. ಆದರೆ, 89 ಮಂದಿ ಇರಬೇಕಾದ ಸಿಬ್ಬಂದಿ ಪೈಕಿ ಕಾರ್ಯ ನಿರ್ವಹಿಸುತ್ತಿರುವವರು ಕೇವಲ 19. ಒಟ್ಟು 4 ಮುಖ್ಯ ಪಶುವೈದ್ಯಾಧಿಕಾರಿಗಳು ಇರಬೇಕಾದಲ್ಲಿ ಒಬ್ಬರೇ ಇದ್ದರೆ, 12 ಪಶುವೈದ್ಯಾಧಿಕಾರಿಗಳ ಪೈಕಿ 5 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಾನುವಾರು ಅಭಿವೃದ್ಧಿ ಅಧಿಕಾರಿ 1, ಜಾನುವಾರು ಅಧಿಕಾರಿ 3ರಲ್ಲಿ 1, ಹಿರಿಯ ಪಶುವೈದ್ಯಕೀಯ ಪರೀಕ್ಷಕರು 18 ಇರಬೇಕಾದಲ್ಲಿ ಕೇವಲ 4, ಪಶುವೈದ್ಯಪರೀಕ್ಷಕರು 2 ಕಾರ್ಯನಿರ್ವಹಿಸುತ್ತಿದ್ದಾರೆ.
ಪಶುವೈದ್ಯಸಹಾಯಕರ 12 ಹುದ್ದೆಗಳೂ ಖಾಲಿ. ಡಿ ದರ್ಜೆಯ 35 ಸಿಬ್ಬಂದಿ ಇರಬೇಕಾದಲ್ಲಿ ಕೇವಲ 3 ಹುದ್ದೆ ಭರ್ತಿಯಾಗಿವೆ. ಒಟ್ಟಾರೆಯಾಗಿ 89 ಮಂದಿ ಬಂಟ್ವಾಳ ತಾಲೂಕಿನ 23 ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಕರ್ತವ್ಯ ಸಲ್ಲಿಸಬೇಕು. ಆದರೆ, ಇರುವವರು ಕೇವಲ 19. ಇದು ಕೃಷಿ ಪ್ರಧಾನ, ಹೈನುಗಾರಿಕೆಯಲ್ಲಿ ಪ್ರಸಿದ್ಧಿ ಪಡೆದ ಬಂಟ್ವಾಳದ ಸ್ಥಿತಿ. ಜಿಲ್ಲೆಯಲ್ಲಿ ಹಕ್ಕಿಜ್ವರ ಲಕ್ಷಣ ಇಲ್ಲ, ಆತಂಕ ಪಡಬೇಕಾಗಿಲ್ಲ. ಮುನ್ನೆಚ್ಚರಿಕೆಯಾಗಿ ಗಡಿ ಭಾಗಗಳ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ನಡೆಸಲಾಗಿದೆ ಎನ್ನುತ್ತಾರೆ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಉಪನಿರ್ದೇಶಕ ಡಾ. ಪ್ರಸನ್ನ ಕುಮಾರ್ ಟಿ.ಜಿ.
Kshetra Samachara
09/01/2021 10:34 am