ಬೀಜಿಂಗ್: ಕಳೆದ ವರ್ಷ ಜೂನ್ 15ರಂದು ಭಾರತ-ಚೀನಾ ಗಡಿಭಾಗದ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೇನಾಪಡೆಯೊಂದಿಗೆ ನಡೆದ ಸಂಘರ್ಷದಲ್ಲಿ ಸಾವು ನೋವು ಉಂಟಾಗಿದೆ ಎಂದು ಇದೇ ಮೊದಲ ಬಾರಿಗೆ ಚೀನಾ ಒಪ್ಪಿಕೊಂಡಿದೆ.
ಭಾರತ ಮತ್ತು ಚೀನಾದ ಸೈನಿಕರ ನಡುವೆ ನಡೆದ ಹಿಂಸಾತ್ಮಕ ಸಂಘರ್ಷದಲ್ಲಿ ತಮ್ಮ ಸೇನೆಯ ನಾಲ್ವರು ಸೈನಿಕರು ಮೃತಪಟ್ಟಿದ್ದಾರೆ ಎಂದು ಚೀನಾ ಒಪ್ಪಿಕೊಂಡಿದೆ. ಚೀನಾದ ಸೇನೆಯು ಇಬ್ಬರು ಅಧಿಕಾರಿಗಳು ಮತ್ತು ಮೂವರು ಸೈನಿಕರಿಗೆ ಶೌರ್ಯ ಪ್ರಶಸ್ತಿಗಳನ್ನು ನೀಡಿದೆ. ಅವರಲ್ಲಿ ಒಬ್ಬ ಅಧಿಕಾರಿ ಮತ್ತು ಮೂವರು ಸೈನಿಕರಿಗೆ ಮರಣೋತ್ತರವಾಗಿ ಈ ಗೌರವ ಸಲ್ಲಿಸಲಾಗಿದೆ. ಪಶ್ಚಿಮದಲ್ಲಿ ಗಡಿ ರಕ್ಷಣೆ ಮಾಡಿದ್ದಕ್ಕಾಗಿ ಈ ಗೌರವ ನೀಡಲಾಗಿದೆ ಎಂದು ಚೀನಾದ ಸುದ್ದಿಸಂಸ್ಥೆ ಕ್ಸಿನುವಾ ವರದಿ ಮಾಡಿದೆ.
ಕಾರಕೋರಂ ಪರ್ವತ ಪ್ರದೇಶದಲ್ಲಿ ನಿಯೋಜಿಸಲಾಗಿದ್ದ ಐವರು ಅಧಿಕಾರಿಗಳು ಮತ್ತು ಸೈನಿಕರ ತ್ಯಾಗಕ್ಕೆ ಪ್ರತಿಯಾಗಿ ಅವರಿಗೆ ಸೇನಾ ಗೌರವ ನೀಡಲಾಗುತ್ತಿದೆ ಎಂದು ಚೀನಾದ ಕೇಂದ್ರೀಯ ಸೇನಾ ಆಯೋಗವು (ಸಿಎಂಸಿ) ಹೇಳಿದೆ. ಗಡಿಯಲ್ಲಿ ಭಾರತದ ಜತೆಗಿನ ಸಂಘರ್ಷವನ್ನು ಉಲ್ಲೇಖಿಸಿಯೇ ಶೌರ್ಯ ಪ್ರಶಸ್ತಿ ನೀಡಲಾಗಿದೆ. ಬೆಟಾಲಿಯನ್ ಕಮಾಂಡರ್ ಚೆನ್ ಹೊಂಗ್ಜುನ್ ಅವರಿಗೆ ‘ಗಡಿ ರಕ್ಷಣೆಯ ಹೀರೊ’ ಪ್ರಶಸ್ತಿ ಮತ್ತು ಚೆನ್ ಕ್ಸಿಯಾಂಗ್ರಾಂಗ್, ಷಿಯಾವೊ ಸಿಯುವಾನ್ ಮತ್ತು ವಾಂಗ್ ಝೌರಾನ್ ಅವರಿಗೆ ಪ್ರಥಮ ದರ್ಜೆಯ ಶೌರ್ಯ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಗಿದೆ. ಗಡಿ ಸಂಘರ್ಷದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕ್ವಿ ಫಬಾವೊ ಅವರಿಗೆ ‘ಹೀರೊ ರೆಜಿಮೆಂಟ್ ಕಮಾಂಡರ್’ ಪ್ರಶಸ್ತಿ ಕೊಡಲಾಗಿದೆ.
ಎಂಟು ತಿಂಗಳ ಬಳಿಕ ಈ ವಿಷಯವನ್ನು ಬಹಿರಂಗಪಡಿಸಿದೆ ಚೀನಾ ಇದು ನಾಲ್ಕು ದಶಕಗಳಲ್ಲಿ ಭಾರತ ಮತ್ತು ಚೀನಾ ನಡುವೆ ನಡೆದ ಅತ್ಯಂತ ಹಿಂಸಾತ್ಮಕವಾದ ಮುಖಾಮುಖಿಯಾಗಿತ್ತು.
PublicNext
20/02/2021 07:45 am