ಅಣ್ಣಿಗೇರಿ: ಕರ್ನಾಟಕ ಸ್ಕ್ವಾಯ್ ಅಸೋಸಿಯೇಷನ್ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಚನಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಸ್ಕ್ವಾಯ್ ಸಮರಕಲೆ ಸ್ಪರ್ಧೆಯಲ್ಲಿ ಧಾರವಾಡ ಜಿಲ್ಲೆಯ ಸ್ಕ್ವಾಯ್ ಸ್ಪೋರ್ಟ್ಸ್ ಅಸೋಸಿಯೇಷನ್ ನ 10 ಕ್ರೀಡಾಪಟುಗಳು ಪ್ರಥಮ ಸ್ಥಾನ ಪಡೆದು ಅತ್ಯುತ್ತಮ ಸಾಧನೆಗೈಯುವ ಮೂಲಕ ರಾಜಸ್ಥಾನದ ಜೈಪುರದಲ್ಲಿ ಫೆಬ್ರುವರಿ 25 ರಿಂದ 29 ರವರೆಗೆ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಧಾರವಾಡ ಜಿಲ್ಲೆಯಿಂದ ರಾಜ್ಯಮಟ್ಟದ ಈ ಸ್ಪರ್ಧೆಯಲ್ಲಿ 24 ವಿದ್ಯಾರ್ಥಿಗಳು ಭಾಗವಹಿಸಿದ್ದು ಅದರಲ್ಲಿ 5 ಪುರುಷ, 5 ಮಹಿಳಾ ಕ್ರೀಡಾಪಟುಗಳು ಗೆಲುವಿನ ನಗೆ ಬೀರಿದ್ದಾರೆ.
ಪುರುಷರ ವಿಭಾಗದಿಂದ ಗಂಗಪ್ಪ ಇಳಕಲ್, ಗಣೇಶ ಶಾನುಭೋಗರ, ಅವಿನಾಶ ಅವರಾದಿ, ಭರತ ಹೂಗಾರ ಹಾಗೂ ಅಜಯ ಹನಸಿ, ಮಹಿಳಾ ವಿಭಾಗದಿಂದ ತೇಜಸ್ವಿನಿ ಹಿರೇಮಠ, ಸುಮತಿ ನಾಗರಹಳ್ಳಿ, ಕವಿತಾ ಬಾಕಳೆ, ಕಾವೇರಿ ನಾಯಕ ಹಾಗೂ ಈಶ್ವರಿ ಬಾಕಳೆ ಸೇರಿದ್ದಾರೆ. ಗೋಲ್ಡನ್ ಕರಾಟೆ ಕ್ಲಬ್ ಅಣ್ಣಿಗೇರಿ ಹಾಗೂ ಧಾರವಾಡ ಜಿಲ್ಲಾ ಸ್ಕ್ವಾಯ್ ಸ್ಪೋರ್ಟ್ಸ್ ಅಸೋಸಿಯೇಷನ್ ನ ತರಬೇತಿದಾರ ಗಣೇಶ್ ಇಳಕಲ್ ಸ್ಪರ್ಧಿಗಳಿಗೆ ತರಬೇತಿ ನೀಡಿದ್ದರು.
ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ನಿರ್ಣಾಯಕತ್ವದಲ್ಲಿ ರಾಜ್ಯ ಸಂಘದ ಅಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಮಹಮ್ಮದ್ ಅಲಿ ನೇತೃತ್ವದಲ್ಲಿ ಈ ಸ್ಪರ್ಧೆ ಜರಗಿತ್ತು. ಧಾರವಾಡ ಜಿಲ್ಲಾ ಸ್ಕ್ವಾಯ್ ಸ್ಪೋರ್ಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಸಿ ಜಿ ನಾವಳ್ಳಿ ಕ್ರೀಡಾ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.
Kshetra Samachara
02/02/2021 09:41 pm