ಭಗವಂತನಿಗೆ ಸಲ್ಲುವ ನಾನಾ ಪ್ರಕಾರದ ಸೇವೆಗಳಲ್ಲಿ ಸಂಗೀತ ಹಾಗೂ ನೃತ್ಯ ಸೇವೆಗೆ ಹೆಚ್ಚಿನ ಪ್ರಾಧಾನ್ಯತೆ.
ಈ ಸೇವೆ ಎಲ್ಲರಿಂದಲೂ ಸಾಧ್ಯವಿಲ್ಲ. ಅದಕ್ಕೆ ದೈವಿಕೃಪೆ ಅತ್ಯವಶ್ಯ. ಭಗವಂತನ್ನು ಆಹ್ವಾನಿಸಿಕೊಂಡು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ, ಆಂಗಿಕ ಹಾವಭಾವಳೊಂದಿಗೆ ದೇವರನ್ನು ಆರಾಧಿಸುವ ಭಕ್ತನ ಅನನ್ಯ ನೃತ್ಯ ಸೇವೆ ನೋಡುವುದೇ ಒಂದು ಭಾಗ್ಯ.
ಭಗವಂತನಿಗೆ ನಿರಂತರ ನೃತ್ಯ ಸೇವೆ ಸಲ್ಲಿಸುತ್ತಿದ್ದಾರೆ ನಿವೃತ್ತ ಸರಕಾರಿ ಉದ್ಯೋಗಿ ಅನಂತ ಹುಲಸೋಗಿ. ಚಿತ್ರಕಲೆಯಲ್ಲಿ ಡಿಪ್ಲೋಮಾ ಪೂರೈಸಿರುವ ಇವರು, ಶ್ರೀ ರಾಘವೇಂದ್ರ ,ಶ್ರೀ ವಾದಿರಾಜ ಸ್ವಾಮಿಗಳು ವಿಷ್ಣುವಿನ ವಿಶ್ವರೂಪ ಮುಂತಾದ ಚಿತ್ರಗಳನ್ನು ಯಥಾವತ್ತಾಗಿ ಬಿಡಿಸುತ್ತಾರೆ.
'ಕೃಷ್ಣ ದರ್ಶನ', ಪ್ರಲ್ಹಾದ ಚರಿತೆ' ಇತ್ಯಾದಿ ರೂಪಕಗಳನ್ನು ಸಿದ್ಧ ಪಡಿಸಿ ಪ್ರದರ್ಶನ ನೀಡುವುದರ ಜೊತೆಗೆ ಕೆಲವು ಸಂಸ್ಕೃತ ನಾಟಕಗಳಲ್ಲೂ ಅಭಿನಯಿಸಿ ಬಹುಮುಖ ಪ್ರತಿಭೆ ಮೆರೆದಿದ್ದಾರೆ. ಪತ್ನಿ ಗೀತಾ,ಮಗಳು ವಿದ್ಯಾಶ್ರೀ ಪುತ್ರರಾದ ನರಸಿಂಹ,ಪುರುಷೋತ್ತಮ, ಸೊಸೆ ಇಂದ್ರಾಣಿ ಎಲ್ಲರೂ ಕಲಾವಿದರಿದ್ದು, ಇವರ ಯಶಸ್ಸಿನ ಹಿಂದಿನ ರೂವಾರಿಗಳಾಗಿದ್ದಾರೆ.
ನೃತ್ಯದಲ್ಲಿ ಹುಲಸೋಗಿಯವರು ವಿಶೇಷ ಅಧ್ಯಯನ ಮಾಡಿಲ್ಲವಾದರೂ, ಧಾರ್ಮಿಕಾಸಕ್ತಿ, ಹಾಡಿಗೆ ತಕ್ಕ ಹಾವಭಾವ, ಆಂಗಿಕ ಭಾವಾಭಿನಯ, ನೃತ್ಯದಲ್ಲಿ ಅಸಾಧಾರಣ ಪ್ರಭುತ್ವ,ಗಟ್ಟಿ ಅನುಭವ, ಹೆಜ್ಜೆಗಳ ಹಿತವಾದ ಸದ್ದು,ಗಜ್ಜೆಗಳ ನಿನಾದ,ಮುಖ್ಯ ನವರಸಗಳ ಮನೋಜ್ಞ ಅಭಿವ್ಯಕ್ತಿ.....ಒಟ್ಟಾರೆ ಪರಕಾಯ ಪ್ರವೇಶ ಮಾಡಿ ಪರಮಾನಂದ ನೀಡುವ ಪರಿ ಪ್ರಶಂಸನಾರ್ಹ. ಜೊತೆಗೆ ಇದೆಕ್ಕೆಲ್ಲ ತಿಮ್ಮಪ್ಪನ ಕೃಪಾಕಟಾಕ್ಷ,ರಾಯರ ಅನುಗ್ರಹವೇ ಕಾರಣ.
ಭಗವಂತ ಕೊಟ್ಟ ಈ ಶರೀರವನ್ನು ನರ್ತನ ಸೇವೆಯ ಮೂಲಕ ಅವನಿಗೇ ಅರ್ಪಿಸುವುದರಿಂದ ದೇಹಾಭಿಮಾನ ಬಿಡಿಸಿ ನೋಡುಗರಿಗೂ ಖುಷಿ ಕೊಟ್ಟು, ಸಾಕ್ಷಾತ್ಕಾರಕ್ಕೆ ದಾರಿ ತೋರಿ ಧನ್ಯತೆಯ ಭಾವ ಮೂಡಿಸುತ್ತಾನೆ ಎಂಬಿತ್ಯಾದಿ ಸರಳ-ಸೌಜನ್ಯ ಸ್ವಭಾವಗಳೇ ಅನಂತ ಹುಲಸೋಗಿಯವರ ಸುದೀರ್ಘ ನೃತ್ಯ ಪಯಣದ ಗುಟ್ಟು!!
ಅನಂತ ಹುಲಸೋಗಿ : 9036760979
● ನಾರಾಯಣ ವೆಂ.ಭಾದ್ರಿ.
ನವನಗರ, ಹುಬ್ಬಳ್ಳಿ.
(ಮೋ)92432 48972.
Kshetra Samachara
19/03/2022 10:18 am