ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ
ಧಾರವಾಡ: ಅದು ಐತಿಹಾಸಿಕ ಹಿನ್ನೆಲೆಯುಳ್ಳ ದೇವಸ್ಥಾನ. ಇಡೀ ಓಣಿಯನ್ನೇ ಕಾಯುವ ದೇವತೆಯರಿರುವ ಜಾಗೃತ ಸ್ಥಳ. ಈಗ ಈ ದೇವಸ್ಥಾನದಲ್ಲಿ ಸಂಭ್ರಮವೋ ಸಂಭ್ರಮ.
ಯಾವುದು ಆ ದೇವಸ್ಥಾನ ಅಂತೀರಾ? ಹಾಗಾದ್ರೆ ಈ ಸ್ಟೋರಿ ನೋಡಿ.
ಹೀಗೆ ಪರಸ್ಪರ ಭಂಡಾರ ಎರಚಿಕೊಂಡು ಸಂಭ್ರಮಿಸುತ್ತಿರುವ ಜನ.. ದೇವಸ್ಥಾನದ ತುಂಬ ಭಕ್ತಿ, ಭಾವಗಳಿಂದ ದೇವಿಗೆ ಕೈ ಮುಗಿದು ನಿಂತಿರುವ ಭಕ್ತ ಸಮೂಹ. ಈ ಎಲ್ಲಾ ದೃಶ್ಯಗಳು ಕಂಡು ಬಂದದ್ದು ಧಾರವಾಡದಲ್ಲಿ.
ಬರೊಬ್ಬರಿ 120 ವರ್ಷಗಳ ನಂತರ ಧಾರವಾಡದ ಕಾಸಬಾಗೌಡರ ಓಣಿಯಲ್ಲಿರುವ ಗ್ರಾಮದೇವಿಯರ ಜಾತ್ರಾ ಮಹೋತ್ಸವ ಜರುಗುತ್ತಿದೆ. ಗ್ರಾಮದೇವಿಯರಾದ ದ್ಯಾಮವ್ವ ಹಾಗೂ ದುರ್ಗಮ್ಮ ದೇವಿಯರ ಜಾತ್ರೆ ಇದಾಗಿದ್ದು, ಇಬ್ಬರೂ ದೇವಿಯರ ಮೂರ್ತಿಗೆ ಬಣ್ಣ ಹಚ್ಚಿಸಲಾಗಿದೆ. ಹೀಗಾಗಿ ಇಡೀ ಓಣಿಯ ಜನರಷ್ಟೇ ಅಲ್ಲ ಧಾರವಾಡದ ಜನತೆ ಭಕ್ತಿಯಿಂದ ದೇವಿಯರ ಜಾತ್ರೆ ಮಾಡುತ್ತಿದ್ದಾರೆ. ನಿನ್ನೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗಿದ್ದು, ತೇರನ್ನು ಸಹ ಎಳೆಯಲಾಗಿದೆ.
ಇನ್ನೂ ಮೂರು ದಿನಗಳ ಕಾಲ ಈ ಜಾತ್ರಾ ಮಹೋತ್ಸವ ನಡೆಯಲಿದ್ದು, ಜಾತ್ರೆಗೆ ಬರುವ ಜನರೆಲ್ಲ ಭಂಡಾರದೆಲ್ಲ ಮಿಂದೆದ್ದು ಹೋಗುತ್ತಿದ್ದಾರೆ. ಹೀಗಾಗಿ ಸಜಹವಾಗಿಯೇ ಈ ಜಾತ್ರೆಯನ್ನು ಭಂಡಾರದ ಜಾತ್ರೆ ಎಂದೇ ಕರೆಯಲಾಗುತ್ತಿದೆ.
120 ವರ್ಷಗಳ ನಂತರ ನಡೆಯುತ್ತಿರುವ ಈ ಜಾತ್ರೆಗೆ ಬೇರೆ ಬೇರೆ ಊರುಗಳಿಂದಲೂ ಜನ ಆಗಮಿಸುತ್ತಿದ್ದಾರೆ. ಮದುವೆಯಾಗಿ ಗಂಡನ ಮನೆಗೆ ಹೋದ ಹೆಣ್ಣು ಮಕ್ಕಳು ಗ್ರಾಮದೇವಿಯರಿಗೆ ಉಡಿ ತುಂಬಲು ಬರುತ್ತಿದ್ದಾರೆ. ಒಟ್ಟಾರೆಯಾಗಿ ಕಾಸಬಾಗೌಡರ ಓಣಿಯ ಈ ಗ್ರಾಮದೇವಿಯರ ಜಾತ್ರೆ ಅದ್ಧೂರಿಯಿಂದ ನೆರವೇರುತ್ತಿದೆ.
Kshetra Samachara
25/12/2021 10:18 pm