ಎಲ್ಲೆಡೆ ರಣಕೇಕೆ ಹಾಕಿ ಅಬ್ಬರಿಸುತ್ತಿರುವ ಅಕಾಲಿಕ ವರುಣನ ಹೊಡೆತಕ್ಕೆ ಕುಂದಗೋಳ ತಾಲೂಕಿನ ರೈತಾಪಿ ಜನರ ಬದುಕು ಅಕ್ಷರಶಃ ನೆಲಕಚ್ಚಿ ಹೋಗಿದೆ.
ಪರಿಸ್ಥಿತಿ ಹೀಗಿದ್ದರೂ ಸ್ಥಳೀಯ ಶಾಸಕಿ, ಸಚಿವ ಹಾಲಪ್ಪ ಆಚಾರ್ ಎಲ್ಲಿದ್ದಾರೆ? ಕುಂದಗೋಳ ತಾಲೂಕಿನ ಜನ ಪಾಪಗ್ರಸ್ಥರಾ ? ನಮ್ಮಲ್ಲಿ ಉಂಟಾದ ಹಾನಿ ಪರಿಶೀಲನೆಗೆ, ಪರಿಹಾರಕ್ಕೆ ಹಿಂದೇಟು ಯಾಕೆ ಎಂದು ರೈತರು ಪ್ರಶ್ನೆ ಮಾಡ್ತಾ ಇದ್ದಾರೆ.
ಹೌದು ! ಈಗಾಗಲೇ ಕುಂದಗೋಳ ತಾಲೂಕಿನಾದ್ಯಂತ ಸುರಿದ ಮಳೆಗೆ ಕೀಳಬೇಕಾದ ಹಾಗೂ ಕಿತ್ತಿಟ್ಟಂತಹ ಶೇಂಗಾ ಬೆಳೆ ಸಂಪೂರ್ಣ ಜಲಾವೃತವಾಗಿ ಮೊಳಕೆ ಒಡೆದಿದೆ. ಹತ್ತಿ ಬೆಳೆಯಂತು ರೋಗಕ್ಕೆ ತುತ್ತಾಗಿ ದಿನೇ ದಿನೇ ಕೊಳೆಯುವ ಮುನ್ಸೂಚನೆ ನೀಡ್ತಾ ಇದೆ. ಸದ್ಯ ಅತಿವೃಷ್ಟಿ ಕಷ್ಟದಲ್ಲೂ ಒಕ್ಕಲು ಮಾಡಿದ ಶೇಂಗಾ ಬೆಳೆಗೆ ಬೆಲೆ, ಬೇಡಿಕೆ ಎರಡು ಇಲ್ಲದಾಗಿದೆ ಎಂದು ಜನಪ್ರತಿನಿಧಿಗಳ ವಿರುದ್ಧ ರೈತರು ಹರಿಹಾಯ್ದಿದ್ದಾರೆ.
ಸದ್ಯ ಕೂಲಿಕಾರರ ಅಭಾವದಿಂದ ದಸರಾ ರಜಾ ಕಾರಣ ಮನೆಯಲ್ಲಿರುವ ಮಕ್ಕಳನ್ನು ಸಹ ಬಿಡದೆ ರೈತಾಪಿ ಕುಟುಂಬಸ್ಥರು ಸುರಿಯುವ ಮಳೆ, ಮೊಣಕಾಲುದ್ದ ರಾಡಿಯಲ್ಲೇ ಶೇಂಗಾ ಬೆಳೆ ಉಳಿಸಿಕೊಳ್ಳಲು ಪರದಾಟ ನಡೆಸಿದ್ದಾರೆ. ಇತ್ತ ಬೆಳೆ ಪರಿಹಾರ, ಬೆಳೆ ವಿಮೆ ಇಲ್ಲದೇ ಆರ್ಥಿಕವಾಗಿ ಕುಗ್ಗಿ ಹೋಗಿದ್ದಾರೆ.
ಒಟ್ಟಾರೆ ವರುಣನ ಅಟ್ಟಹಾಸಕ್ಕೆ ರೈತಾಪಿ ಜನರ ಬದುಕು ನಲುಗಿ ಹೋಗಿದ್ದು, ಶೇಂಗಾ, ಹತ್ತಿ ಬೆಳೆ ನೀರಿನಲ್ಲಿ ಹೋಮವಾಗಿ ಹೋದ್ರೇ, ಹಿಂಗಾರು ಬೆಳೆಯನ್ನು ಯಾವಾಗ ಬಿತ್ತುವುದು ಎಂಬುದು ರೈತರಿಗೆ ತಿಳಿಯದಾಗಿದೆ.
ಶ್ರೀಧರ್ ಪೂಜಾರ, ಪಬ್ಲಿಕ್ ನೆಕ್ಸ್ಟ್ ವಿಶೇಷ, ಕುಂದಗೋಳ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
12/10/2022 04:44 pm