ಧಾರವಾಡ: ಧಾರವಾಡ ತಹಶೀಲ್ದಾರ ಡಾ.ಸಂತೋಷಕುಮಾರ ಬಿರಾದಾರ ಅವರು ಜಮೀನೊಂದರ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಹೌದು! ಗುಲಗಂಜಿಕೊಪ್ಪದ ಪಾರ್ವತಿ ಕಾಳಣ್ಣವರ ಅವರಿಗೆ ಗುಲಗಂಜಿಕೊಪ್ಪದ ಪ್ರತ್ಯೇಕ 3 ಸರ್ವೇ ನಂಬರ್‌ಗಳಲ್ಲಿ ಪಿತ್ರಾರ್ಜಿತ ಆಸ್ತಿ ಇದೆ. ಇದಕ್ಕೆ ಪಾರ್ವತಿ, ಸುರೇಶ, ದ್ರಾಕ್ಷಾಯಣಿ, ರತ್ನವ್ವ, ಶಾಂತವ್ವ ಹಾಗೂ ಬಸಲಿಂಗವ್ವ ಎನ್ನುವವರು ವಾರಸುದಾರರಾಗಿದ್ದಾರೆ. ಈ ಸಂಬಂಧ 1998 ರಲ್ಲಿ ಪಾಲು, ವಾಟ್ನಿ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ನಂತರದ ದಿನಗಳಲ್ಲಿ ಹೈಕೋರ್ಟ್‌ನಲ್ಲೂ ಪ್ರಕರಣ ದಾಖಲಾಗಿತ್ತು. ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯ ಈ ಸಂಬಂಧ ತಡೆಯಾಜ್ಞೆ ನೀಡಿದೆ. ಆದಾಗ್ಯೂ ಧಾರವಾಡ ತಹಶೀಲ್ದಾರ ನ್ಯಾಯಾಲಯದ ತಡೆಯಾಜ್ಞೆ ಉಲ್ಲಂಘಿಸಿ ಪಹಣಿ ಪತ್ರಿಕೆಗಳಲ್ಲಿನ ನಮೂದು ಇದ್ದ ಹೆಸರುಗಳನ್ನು ಏಕಾಏಕಿ ತೆಗೆದು ಹಾಕಿ ಎದುರುದಾರರ ಹೆಸರನ್ನು ಮಾತ್ರ ಹಾಕಿಸಿ ಆದೇಶ ಹೊರಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ತಹಶೀಲ್ದಾರರ ಈ ಕ್ರಮವನ್ನು ಖಂಡಿಸಿ ಅನ್ಯಾಯಕ್ಕೊಳಗಾದ ಮಹಿಳೆಯರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ತಹಶೀಲ್ದಾರರ ಮೇಲೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಹೈಕೋರ್ಟ್ ಕೂಡ ಈ ಸಂಬಂಧ ಮುಂದಿನ ಆದೇಶದವರೆಗೂ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ತಡೆಯಾಜ್ಞೆ ನೀಡಿತ್ತು. ಆದರೂ, ತಹಶೀಲ್ದಾರರು ತಡೆಯಾಜ್ಞೆ ಉಲ್ಲಂಘಿಸಿ ಮೂಲ ವಾರಸುದಾರರ ಹೆಸರನ್ನು ಕೈಬಿಟ್ಟು ಎದುರುದಾರರ ಹೆಸರನ್ನು ಮಾತ್ರ ಪಹಣಿ ಪತ್ರಿಕೆಯಲ್ಲಿ ಸೇರ್ಪಡೆ ಮಾಡಿಸಿದ್ದಾರೆ. ಪಹಣಿ ಪತ್ರಿಕೆಯಲ್ಲಿ ಹೆಸರು ಸೇರಿಸಬೇಕಾದರೆ ತಿಂಗಳಾನುಗಟ್ಟಲೇ ಓಡಾಡಬೇಕಾದ ಪರಿಸ್ಥಿತಿ ಇರುವ ಈ ಸಂದರ್ಭದಲ್ಲಿ ತಹಶೀಲ್ದಾರರು ಕೇವಲ ಒಂದು ದಿನದಲ್ಲಿ ಎದುರುದಾರರ ಹೆಸರು ಸೇರ್ಪಡೆ ಮಾಡಿಸಿದ್ದಾರೆ ಎಂಬ ಆರೋಪವನ್ನೂ ಪ್ರತಿಭಟನಾಕಾರರು ಮಾಡಿದ್ದು, ಈ ಸಂಬಂಧ ಎಸಿಬಿಗೂ ಅವರು ದೂರು ನೀಡಿದ್ದಾರೆ.
Kshetra Samachara
28/02/2022 05:31 pm