ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ವಿನಯ ಕುಲಕರ್ಣಿಗೆ ಸಿಗದ ರಿಲೀಫ್: ಮೂರು ದಿನ ಸಿಬಿಐ ಕಸ್ಟಡಿಗೆ

ಧಾರವಾಡ: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ನಾಳೆ ತಮ್ಮ 55ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿರಬೇಕಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಸಿಬಿಐ ನೀಡಿದ ಶಾಕ್ ನಿಂದಾಗಿ ಇದೀಗ ಅಜ್ಞಾತವಾಸ ಅನುಭವಿಸುವಂತಾಗಿದೆ.

ಹೌದು! ನಿನ್ನೆಯಷ್ಟೆ ಧಾರವಾಡದ 2ನೇ ಹೆಚ್ಚುವರಿ ನ್ಯಾಯಾಲಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಅವರನ್ನು ಒಂದು ದಿನ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಇಂದು ಬೆಳಿಗ್ಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಿಬಿಐ ಅಧಿಕಾರಿಗಳು ವಿನಯ್ ಅವರನ್ನು ಧಾರವಾಡದ 2ನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ಎಚ್.ಪಂಚಾಕ್ಷರಿ ಅವರ ಎದುರು ಹಾಜರುಪಡಿಸಿದರು. ಬೆಳಿಗ್ಗೆ ವಾದ, ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಈ ಪ್ರಕರಣದ ತೀರ್ಪನ್ನು ಕಾಯ್ದಿರಿಸಿದ್ದರು.

ಮಧ್ಯಾಹ್ನದ ನಂತರ ಮತ್ತೆ ವೀಡಿಯೋ ಕಾನ್ಫರನ್ಸ್ ಮೂಲಕ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ, ಆರೋಪಿ ಪರ ವಕೀಲರು ಸಲ್ಲಿಸಿದ್ದ ತಕರಾರು ಅರ್ಜಿ ಹಾಗೂ ಸಿಬಿಐ ಪರ ವಕೀಲರ ಅರ್ಜಿಯ ವಿಚಾರಣೆ ನಡೆಸಿತು. ಆನಂತರ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ವಿನಯ್ ಅವರನ್ನು ಮೂರು ದಿನಗಳ ಕಾಲ ಹೆಚ್ಚಿನ ವಿಚಾರಣೆಗಾಗಿ ಸಿಬಿಐ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದರು.

ನಿನ್ನೆ ರಾತ್ರಿಯೇ ವಿನಯ್ ಅವರನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಕರೆದೊಯ್ಯಲಾಗಿತ್ತು. ಅಲ್ಲಿಂದಲೇ ವೀಡಿಯೋ ಕಾನ್ಫರನ್ಸ್ ಮೂಲಕ ಅವರನ್ನು ವಿಚಾರಣೆಗಾಗಿ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿತ್ತು.

ನಾಳೆ ವಿನಯ್ ಅವರ ಹುಟ್ಟು ಹಬ್ಬ ಇರುವುದರಿಂದ ಅವರ ಅಭಿಮಾನಿಗಳು ನಗರದೆಲ್ಲೆಡೆ ಬ್ಯಾನರ್ ಗಳನ್ನು ಹಾಕಿದ್ದರು. ಆದರೆ, ನ್ಯಾಯಾಲಯದ ಈ ತೀರ್ಪಿನಿಂದಾಗಿ ವಿನಯ್ ಅವರಿಗೆ ರಿಲೀಫ್ ಸಿಗದಂತಾಗಿದ್ದು, ಮೂರು ದಿನಗಳ ಕಾಲ ಸಿಬಿಐ ವಿನಯ್ ಅವರನ್ನು ತನ್ನ ಕಸ್ಟಡಿಗೆ ತೆಗೆದುಕೊಂಡು ಹೆಚ್ಚಿನ ವಿಚಾರಣೆ ನಡೆಸಲಿದೆ.

Edited By : Nagesh Gaonkar
Kshetra Samachara

Kshetra Samachara

06/11/2020 07:34 pm

Cinque Terre

79.6 K

Cinque Terre

7

ಸಂಬಂಧಿತ ಸುದ್ದಿ