ಹುಬ್ಬಳ್ಳಿ: ಅದು ರಾಜ್ಯದ ಎರಡನೇ ಅತಿ ದೊಡ್ಡ ಮಹಾನಗರ ಪಾಲಿಕೆ. ಆ ಪಾಲಿಕೆಗೆ ಮೂರು ವರ್ಷದ ಬಳಿಕ ಮೇಯರ್ ಉಪಮೇಯರ್ ಆಯ್ಕೆ ಆಗಿದೆ. ಧಾರವಾಡದವರು ಮೇಯರ್ ಗೌನ್ ತೊಟ್ಟರೇ, ಹುಬ್ಬಳ್ಳಿಯವರು ಉಪಮೇಯರ್ ಗೌನ್ ತೊಟ್ಟು ಗೆಲುವಿನ ನಗೆ ಬೀರಿದ್ದಾರೆ. ಇನ್ನು ಪಾಲಿಕೆಯನ್ನು ತನ್ನ ತೆಕ್ಕೆಗೆ ಪಡೆದ ಖುಷಿಯಲ್ಲಿ ಕಮಲ ಪಾಳೆಯ ಸಿಹಿ ಹಂಚಿ ಸಂಭ್ರಮಿಸಿತು. ಆದರೆ ಸಾಕಷ್ಟು ಸಮಸ್ಯೆಗಳಿರುವ ಮಹಾನಗರಕ್ಕೆ ಸವಾಲು ಸ್ವೀಕರಿಸಿ ಅಧಿಕಾರದ ಗದ್ದುಗೆ ಏರಿದ್ದಾರೆ.
ಹೌದು... ಅಂತೂ..ಇಂತು..ಪಾಲಿಕೆಗೆ ಜನಪ್ರತಿನಿಧಿಗಳು ಎಂಟ್ರಿ ಕೊಟ್ಟಿದ್ದಾರೆ. ಕಳೆದ ಮೂರು ವರ್ಷದಿಂದ ತಾವು ಆಡಿದ್ದೇ ಆಟ ಅಂತ ಅಂದುಕೊಂಡಿದ್ದ ಪಾಲಿಕೆ ಅಧಿಕಾರಿಗಳ ಆಟಾಟೋಪಕ್ಕೆ ಬ್ರೇಕ್ ಬಿದ್ದಿದೆ.
ನಾಮಪತ್ರ ಸಲ್ಲಿಸುವ ಕೊನೇ ಕ್ಷಣದ ವರೆಗೂ ಮೇಯರ್ ಸ್ಥಾನಕ್ಕೆ ತೀವ್ರ ಪೈಪೋಟಿ ಎದುರಾಗಿತ್ತು. ಮಾಜಿ ಮಹಾಪೌರ ವೀರಣ್ಣ ಸವಡಿ, ವಿಜಯಾನಂದ ಶೆಟ್ಟಿ ಹಾಗೂ ಈರೇಶ ಅಂಚಿಟಗೇರಿ ಹೆಸರುಗಳು ಮೇಲಾಟ ನಡೆದಿತ್ತು. ಆದರೆ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸಿದ ಬಿಜೆಪಿ ಹಿರಿಯ ಮುಖಂಡರು, ಮೇಯರ್ ಸ್ಥಾನಕ್ಕೆ ಧಾರವಾಡದ 4 ನೇ ವಾರ್ಡ್ ಸದಸ್ಯನಾದ ಈರೇಶ ಅಂಚಟಗೇರಿ ಅವರ ಹೆಸರನ್ನು ಅಂತಿಮಗೊಳಿಸಿದ್ರು. ಈ ಮೂಲಕ ಪ್ರತ್ಯೇಕ ಕೂಗು ಎಬ್ಬಿಸಿದ್ದ ಧಾರವಾಡದ ಮಂದಿಯನ್ನು ಸಮಾಧಾನ ಪಡಿಸುವಲ್ಲಿ ಕಮಲ ಕಲಿಗಳು ಯಶಸ್ವಿಯಾದರು.ಇನ್ನು ಈರೇಶ ಅಂಚಟಗೇರಿ ಬರೀ ಎರಡು ಬಾರಿ ಪಾಲಿಕೆ ಸದಸ್ಯರಾಗಿದ್ರು ಅದೃಷ್ಟ ಕುಲಾಯಿಸಿದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ಇತ್ತ ಮೂಲಭೂತ ಸೌಕರ್ಯಗಳ ಸಮಸ್ಯೆಗಳನ್ನು ಎದುರಿಸುತ್ತಿರುವ ಜನ ಇವರ ಮೇಲೆ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದಾರೆ.
ಇನ್ನೂ ಹುಬ್ಬಳ್ಳಿ ಪಾಲಿಕೆಯ ಸಭಾ ಭವನದಲ್ಲಿ ಮೇಯರ್, ಉಪ ಮೇಯರ್ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಬೆಳಗಾವಿಯ ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲನ್ ಬಿಸ್ವಾಸ್ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು.
ಕೈ ಎತ್ತುವ ಮೂಲಕ ಆಯ್ಕೆ ಪ್ರಕ್ರಿಯೆ ನಡೆದಿದೆ. ಒಟ್ಟು 89 ಸದಸ್ಯರ ಪೈಕಿ 50 ಸದಸ್ಯರ ಬೆಂಬಲದಿಂದ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ. ಇತ್ತ ಕಾಂಗ್ರೆಸ್ ನ ಮಯೂರ್ ಮೋರೆ 35 ಮತ ಪಡೆದು ಸೋಲಬೇಕಾಯಿತು. ಬಿಜೆಪಿಯ 39 ಸದಸ್ಯರು, ಪಕ್ಷಕ್ಕೆ ಸೇರ್ಪಡೆಯಾದ ಮೂವರು ಪಕ್ಷೇತರರು ಹಾಗೂ ವಿಶೇಷ ಮತದಾನದ ಹಕ್ಕುಗಳಿರುವ ಪ್ರಹ್ಲಾದ ಜೋಶಿ, ಜಗದೀಶ ಶೆಟ್ಟರ, ಪ್ರದೀಪ ಶೆಟ್ಟರ, ಅರವಿಂದ ಬೆಲ್ಲದ, ಅಮೃತ ದೇಸಾಯಿ ಹಾಗೂ ಎಸ್.ವಿ. ಸಂಕನೂರ ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡಿದೆ. ಇನ್ನೂ ಮೇಯರ್ ಸ್ಥಾನ ಧಾರವಾಡದ ಪಾಲಾದ ಕಾರಣ ಉಪ ಮೇಯರ್ ಸ್ಥಾನವನ್ನು ಹುಬ್ಬಳ್ಳಿಯ ವಾರ್ಡ್ ನಂ.44ರ, ಮೊದಲ ಬಾರಿಗೆ ಪಾಲಿಕೆ ಸದಸ್ಯರಾದ ಉಮಾ ಮುಕುಂದ ಅವರಿಗೆ ನೀಡಲಾಯಿತು. ಉಪ ಮೇಯರ್ ಮಾಧ್ಯಮಗಳೊಂದಿಗೆ ಮಾತನಾಡಿ ಸಂತಸ ಹಂಚಿಕೊಂಡ್ರು.
ಒಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡದ ಜನರ ಮಧ್ಯೆ ಮೇಯರ್, ಉಪಮೇಯರ್ ಆಯ್ಕೆ ವಿಚಾರವಾಗಿ ಸಾಕಷ್ಟು ಗೊಂದಲಗಳ ನಡುವೆ ಧಾರವಾಡಕ್ಕೆ ಮೇಯರ್ ಹಾಗೂ ಹುಬ್ಬಳ್ಳಿಗೆ ಉಪಮೇಯರ್ ಸ್ಥಾನ ನೀಡುವ ಮೂಲಕ ಪ್ರಾದೇಶಿಕ ಅಸಮಾನತೆ ಸರಿದೊಗಿಸಲಾಗಿದೆ.
ಇಷ್ಟು ದಿನ ಜನಪ್ರತಿನಿಧಿಗಳಿಲ್ಲದೆ ಜಿಡ್ಡುಗಟ್ಟಿದ್ದ ಪಾಲಿಕೆಯ ಆಡಳಿತ ಯಂತ್ರಕ್ಕೆ ಇನ್ನಾದರೂ ವೇಗ ಸಿಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
Kshetra Samachara
29/05/2022 11:31 am